ಚಿತ್ರದುರ್ಗ : ಪೊಲೀಸ್ ಕರ್ತವ್ಯ ನಿಷ್ಠೆಯಿಂದ ಜನರು ಶಾಂತಿಯುತ ಮತ್ತು ಶಾಂತಿಯುತ ಜೀವನ ನಡೆಸಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಎಸ್.ರೇಖಾ ಹೇಳಿದರು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹುತಾತ್ಮರ ಸ್ಮಾರಕಕ್ಕೆ ನಮನ ಸಲ್ಲಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಇಲ್ಲದಿದ್ದರೆ ನಾವು ಶಾಂತಿಯುತವಾಗಿ ಮನೆಯಲ್ಲಿ ಇರಲು ಸಾಧ್ಯವಿಲ್ಲ. ದೇಶದ ಹೊರಗೆ ದೇಶವನ್ನು ಕಾಯುವ ಸೈನಿಕ, ದೇಶವನ್ನು ಕಾಪಾಡುವ ನಮ್ಮ ಪೊಲೀಸರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಾರೆ. ಅವರು ಧೈರ್ಯದಿಂದ ಮುನ್ನಡೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಹುತಾತ್ಮರಾಗುವ ಸಾಧ್ಯತೆಗಳಿವೆ. ನಮ್ಮ ಪೊಲೀಸರು ಯಾವತ್ತೂ ಹೇಡಿಗಳಂತೆ ಹಿಂದೆ ಬಿದ್ದಿಲ್ಲ. ಧೈರ್ಯವಾಗಿ ಹೆಜ್ಜೆ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಧಮೇಂದ್ರಕುಮಾರ್ ಮೀನಾ ಮಾತನಾಡಿ, ಪ್ರತಿ ವರ್ಷ ಅ. 21ರಂದು ಹುತಾತ್ಮರಾದ ಪೊಲೀಸ್ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ದೇಶದಲ್ಲಿ ಒಟ್ಟು 189 ಅಧಿಕಾರಿಗಳು ಮತ್ತು ಸಿಬ್ಬಂದಿಗಳು 2022 ರ ಸೆ. 1 ರಿಂದ ಈ ವರ್ಷ 2023 ರ ಆಗಸ್ಟ್ 31 ರವರೆಗೆ ಕರ್ತವ್ಯದಲ್ಲಿ ಹುತಾತ್ಮರಾಗಿದ್ದಾರೆ.
ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಎಸ್.ರೇಖಾ, ಜಿಲ್ಲಾ ರಕ್ಷಣಾಧಿಕಾರಿ ಧಮೇಂದ್ರಕುಮಾರ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ, ಗೃಹರಕ್ಷಕ ದಳದ ಜಿಲ್ಲಾ ಕಮಾಂಡರ್ ಸಿ. ಸಂಧ್ಯಾ ಸೇರಿದಂತೆ ಕೆ.ಪೊಲೀಸ್ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು. ಹುತಾತ್ಮರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಲಾಯಿತು. ಈ ಸಂದರ್ಭದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್, ಲೋಕೇಶ್ವರಪ್ಪ, ಜಿಲ್ಲಾ ಪೊಲೀಸ್ ಕಚೇರಿ ಸಹಾಯಕ ಆಡಳಿತಾಧಿಕಾರಿ ಪುಷ್ಪಾ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
