Wednesday, April 16, 2025
Google search engine

Homeಸಿನಿಮಾಕನ್ನಡದ ಖ್ಯಾತ ನಟಿ, ನಿರೂಪಕಿ ಅಪರ್ಣ ನಿಧನ!

ಕನ್ನಡದ ಖ್ಯಾತ ನಟಿ, ನಿರೂಪಕಿ ಅಪರ್ಣ ನಿಧನ!

ಬೆಂಗಳೂರು: ಮಜಾ ಟಾಕೀಸ್‌ನಲ್ಲಿ ವರಲಕ್ಷ್ಮೀಯಾಗಿ ಎಲ್ಲರನ್ನು ನಗಿಸುತ್ತಿದ್ದ, ಕನ್ನಡ ಟಿವಿ ಕಾರ್ಯಕ್ರಮಗಳಲ್ಲಿ ಎಲ್ಲರನ್ನೂ ರಂಜಿಸುತ್ತಿದ್ದ, ಖ್ಯಾತ ಕನ್ನಡ ನಿರೂಪಕಿ ಅಪರ್ಣ ಕೊನೆಯುಸಿರೆಳೆದಿದ್ದಾರೆ. ಅವರಿಗೆ ೫೧ ವರ್ಷ ವಯಸ್ಸಾಗಿತ್ತು. ಖ್ಯಾತ ನಿರೂಪಕಿ ಅಪರ್ಣ ತಮ್ಮ ಬನಶಂಕರಿ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇವರು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ವರದಿಗಳು ತಿಳಿಸಿವೆ. ಇವರಿಗೆ ಕ್ಯಾನ್ಸರ್ ೪ನೇ ಹಂತದಲ್ಲಿತ್ತು ಎಂದು ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಮಾಹಿತಿ ಹಂಚಿಕೊಂಡಿದ್ದಾರೆ.

ಅಪರ್ಣಾ ಅವರು ಆಕಾಶವಾಣಿ ಮತ್ತು ಕಿರುತೆರೆಯ ಕಲಾವಿದೆ. ಇವರ ಪೂರ್ತಿ ಹೆಸರು ಅಪರ್ಣಾ ವಸ್ತಾರೆ. ಕಣಗಾಲ್ ಪುಟ್ಟಣ್ಣನವರ ಮಸಣದ ಹೂವು ಚಿತ್ರದಿಂದ ಬೆಳಕಿಗೆ ಬಂದವರು. ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದರು. ಇವರ ಅನಿರೀಕ್ಷಿತ ಸಾವು ಅವರ ಅಪಾರ ಅಭಿಮಾನಿಗಳಿಗೆ ಆಘಾತ ತಂದಿದೆ.

ಕನ್ನಡ ದೂರದರ್ಶನದ ಆರಂಭದ ಹಂತದಲ್ಲಿಯೇ ಕಾರ್ಯಕ್ರಮ ನೀಡುತ್ತ ಬಂದಿದ್ದರು. ೯೦ ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಟಿವಿ ಶೋಗಳನ್ನು ನಡೆಸಿದ್ದಾರೆ. ಜನಪ್ರಿಯ ಧಾರಾವಾಹಿ ?ಮುಕ್ತ?ದಲ್ಲಿ ಶೀಲಾ ಪ್ರಸಾದ್ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಅಂಕಣಗಾರ್ತಿಯಾಗಿಯೂ ಜನಪ್ರಿಯರಾಗಿದ್ದರು. ಯುವ ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಅವರನ್ನು ವಿವಾಹವಾಗಿದ್ದರು.

೨೦೧೩ ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್ ನಲ್ಲಿ ಅಪರ್ಣ ಭಾಗವಹಿಸಿದ್ದರು. ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ `ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿಯಾಗಿ ಎಲ್ಲರ ಮನಮೆಚ್ಚಿದ ಕಲಾವಿದೆಯಾಗಿದ್ದರು.

ಸಿಎಂ ಸಂತಾಪ: ನಟಿ, ಖ್ಯಾತ ನಿರೂಪಕಿ ಅಪರ್ಣಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ಸರ್ಕಾರಿ ಸಮಾರಂಭಗಳು ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯಲ್ಲಿ ಅತ್ಯಂತ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದ ಬಹುಮುಖ ಪ್ರತಿಭೆಯೊಂದು ಬಹುಬೇಗ ನಮ್ಮನ್ನು ಅಗಲಿರುವುದು ದುಃಖದ ಸಂಗತಿ. ಮೃತ ಅಪರ್ಣಾಳ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ.

RELATED ARTICLES
- Advertisment -
Google search engine

Most Popular