Monday, December 2, 2024
Google search engine

Homeಅಪರಾಧಕಾನೂನುಪೆನ್ ಡ್ರೈವ್ ಹಂಚಿಕೆ ಪ್ರಕರಣ : ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಪ್ರೀತಂ...

ಪೆನ್ ಡ್ರೈವ್ ಹಂಚಿಕೆ ಪ್ರಕರಣ : ಎಫ್‌ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಪ್ರೀತಂ ಗೌಡ

ಬೆಂಗಳೂರು: ಜಾ.ದಳದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣಕ್ಕೆ ಸಂಬಂಧಿಸಿದ ಪೆನ್‌ಡ್ರೈವ್ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿ ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ಈ ಸಂಬಂಧ ಪ್ರೀತಂ ಗೌಡ ಪರ ಹೈಕೋರ್ಟ್ ವಕೀಲ ಸಂದೀಪ್ ಎಸ್. ಪಾಟೀಲ್ ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠಕ್ಕೆ ಅರ್ಜಿ ಹಿಂಪಡೆಯುವ ಕುರಿತಾಗಿ ಮೆಮೊ ಸಲ್ಲಿಸಿದರು.

ಅರ್ಜಿದಾರರು ಮುಗ್ಧರಾಗಿದ್ದು, ತನಿಖೆಗೆ ಸಹಕರಿಸುತ್ತಿದ್ದಾರೆ. ತನಿಖಾಧಿಕಾರಿ ಕರೆದಾಗಲೆಲ್ಲಾ ಹೋಗಿ ವಿಚಾರಣೆ ಎದುರಿಸಿ ಬಂದಿದ್ದಾರೆ. ತನಿಖೆ ಮುಕ್ತಾಯಗೊಂಡರೆ ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ಇದೆ. ಹಾಗಾಗಿ, ಈ ಅರ್ಜಿಯನ್ನು ಹಿಂಪಡೆಯಲು ಇಚ್ಛಿಸಿರುವ ಪ್ರೀತಂ ಗೌಡ ಅವರ ಮನವಿಯನ್ನು ಮಾನ್ಯ ಮಾಡಬೇಕು’ ಎಂಬ ಮೆಮೊದ ಒಕ್ಕಣಿಕೆಯ ತಾತ್ಪರ್ಯವನ್ನು ಸಂದೀಪ್ ಪಾಟೀಲ ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಮೂರ್ತಿಯವರು, ಒಂದು ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಆರೋಪ ಹೊರಿಸಿ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರೆ, ಅರ್ಜಿದಾರರು ಅದನ್ನು ಪ್ರಶ್ನಿಸುವ ಸ್ವಾತಂತ್ರ್ಯವನ್ನು ಮುಕ್ತವಾಗಿ ಇರಿಸಲಾಗಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿ ವಿಲೇವಾರಿ ಮಾಡಿ ಆದೇಶಿಸಿದರು.

ಏನಿದು ಪ್ರಕರಣ?: ಹಾಸನದ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಹಾಸನ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಇತರರ ವಿರುದ್ಧ ಬೆಂಗಳೂರಿನ ಸೈಬರ್ ಅಪರಾಧ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ-೧೮೬೦ರ ಕಲಂ ೩೫೪ಎ, ೩೫೪ಡಿ, ೩೫೪ಬಿ ಮತ್ತು ೫೦೬ರ ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-೨೦೦೦ರ ಕಲಂಗಳಾದ ೬೭, ೬೬ಇ ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದೆ.

RELATED ARTICLES
- Advertisment -
Google search engine

Most Popular