ಬೆಂಗಳೂರು: ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಲು ಸೆಪ್ಟೆಂಬರ್ ೧೫ರವರೆಗೆ ಅವಕಾಶ ನೀಡಲಾಗಿದೆ. ಎಚ್‌ಎಸ್‌ಆರ್‌ಪಿಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಗಡುವನ್ನು ವಿಸ್ತರಿಸಿರುವುದು ಇದು ನಾಲ್ಕನೇ ಬಾರಿಯಾಗಿದೆ . ಹಿಂದಿನ ಗಡುವು ನವೆಂಬರ್ ೧೭, ೨೦೨೩, ಫೆಬ್ರವರಿ ೧೭, ೨೦೨೪ ಮತ್ತು ಮೇ ೧೭, ೨೦೨೪ ಆಗಿತ್ತು. HSRP ಗಳನ್ನು ಪಡೆಯದ ವಾಹನ ಮಾಲೀಕರು ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ.
೨೦೧೯ರ ಏಪ್ರಿಲ್ ೧ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ಪಿ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸಾರಿಗೆ ಇಲಾಖೆ ಕಳೆದ ವರ್ಷ ಆಗಸ್ಟ್ನಲ್ಲಿ ಅಧಿಸೂಚನೆ ಹೊರಡಿಸಿತ್ತು. ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಕೆಗೆ ಸೆಪ್ಟೆಂಬರ್ ೧೫ರವರೆಗೆ ಗಡುವು ವಿಸ್ತರಿಸಲಾಗಿದೆ. ೨೦೧೯ರ ಏಪ್ರಿಲ್ ೧ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು.
ಪೊಲೀಸ್ ಇಲಾಖೆ ಜೊತೆಗೂಡಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅವಧಿಯೊಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದಿದ್ದರೆ ೫೦೦ ರೂ.ನಿಂದ ೧,೦೦೦ ರೂ.ವರೆಗೆ ದಂಡ ವಿಧಿಸಲಿದೆ ಎಂದು ಹೇಳಲಾಗಿದೆ.