ನವದೆಹಲಿ: ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರಿಗೆ ಕನಿಷ್ಠ ಪಿಂಚಣಿ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದರಿಂದ 60 ವರ್ಷ ಮೇಲ್ಪಟ್ಟ ದೇಶದ 85 ಲಕ್ಷ ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವ ಸಾಧ್ಯತೆ ಇದೆ.
ಇದಕ್ಕಾಗಿ ಕಟ್ಟಡ ಮತ್ತು ಇತರ ಕೆಲಸಗಾರರ ಸೆಸ್ ಮೂಲಕ ಸಂಗ್ರಹಿಸಿದ್ದ 76 ಸಾವಿರ ಕೋಟಿ ರೂ. ನಿಧಿಯನ್ನು ಬಳಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ನೋಂದಣಿ, ನವೀಕರಣ ಪ್ರಕ್ರಿಯೆಗಳನ್ನು ಸುಲಭಗೊಳಿಸುವುದರ ಜತೆಗೆ ವರ್ಷದಲ್ಲಿ 90 ದಿನಗಳ ಕಡ್ಡಾಯ ಕೆಲಸ ನೀಡುವ ಬಗ್ಗೆಯೂ ಯೋಚಿಸಿದೆ.
ಅಸಂಘಟಿತ ವಲಯದ 60 ವರ್ಷ ಮೇಲ್ಪಟ್ಟ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶ. ಕಾರ್ಮಿಕರಿಗೆ ದೇಶಾದ್ಯಂತ ಬಳಕೆಯಾಗುವ ಒಂದೇ ಕಾರ್ಡನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಇದಕ್ಕಾಗಿ 1996ರ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕಾಯ್ದೆಗೆ ತಿದ್ದುಪಡಿ ತರುವ ಸಾಧ್ಯತೆ ಇದೆ. ಅಂದಾಜು 85 ಲಕ್ಷ ಜನರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಪೈಕಿ ಅರ್ಧದಷ್ಟು ಜನರು ಮಾತ್ರ ರಾಜ್ಯಗಳ ಕಲ್ಯಾಣ ಮಂಡಳಿಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.