ಬೆಂಗಳೂರು: ಚುನಾವಣೆ ವರ್ಷದಲ್ಲಿ ೨೦೨೪ ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಕ್ಕೆ ಹೊಸ ದಿಕ್ಕು ಮತ್ತು ಭರವಸೆ ಸಿಕ್ಕಿದೆ, ಎಲ್ಲರಿಗೂ ಮನೆ, ಎಲ್ಲರಿಗೂ ನೀರು, ಪ್ರತಿ ಮನೆಗೆ ವಿದ್ಯುತ್‌ಗೆ ಒತ್ತು ಕೊಡಲಾಗುತ್ತಿದೆ. ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪುತ್ತಿವೆ ಎಂದು ಹೇಳಿದ್ದು ಮೊದಲ ಬಾರಿಗೆ ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂಬ ಪದವನ್ನು ಬಳಸಿದ್ದಾರೆ.
ತಮ್ಮ ಆಡಳಿತ ಅವಧಿಯ ಉದ್ದಕ್ಕೂ ಕೇವಲ ಕಾರ್ಪೋರೇಟ್ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರವು ಇದೀಗ ಚುನಾವಣೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ಈ ಹಿಂದಿನ ಬಜೆಟ್ ನಂತೆಯೇ ಘೋಷಿಸಿದ್ದು ಇವುಗಳೂ ಕೂಡಾ ಹಿಂದೆ ಪ್ರಧಾನಿಗಳು ಘೋಷಿಸಿದ ೨೦ ಲಕ್ಷ ಕೋಟಿ ಕರೋನಾ ಪ್ಯಾಕೇಜ್ ರೀತಿಯ ಸುಳ್ಳುಗಳ ಸರಮಾಲೆಯೇ ಆಗಿದೆ. ಪ್ರತಿ ಬಜೆಟ್ ನಲ್ಲೂ ಇವರು ಕೆಲವು ಹೊಸ ಹೊಸ ಸಂಸ್ಕೃತ ಪದಗಳನ್ನು ಜನರಿಗೆ ಪರಿಚಯಿಸುತ್ತಿದ್ದರು. ಆದರೆ ಈ ಬಾರಿ ಹೊಸದಾಗಿ ಬಡವರು, ಮಹಿಳೆಯರು, ಯುವಕರು ಮತ್ತು ಅನ್ನದಾತರು ಎಂದು ಹೇಳುತ್ತಿದ್ದು ಈ ಪದಗಳನ್ನು ಕೇಳಿದ್ದೇ ಜನರ ಭಾಗ್ಯ ಎನ್ನುವಂತೆ ಇದೆ.
ಕಳೆದ ೧೦ ವರ್ಷಗಳ ಕೇಂದ್ರದ ಬಜೆಟ್ ಅನ್ನು ಅವಲೋಕಿಸಿದಾಗ ಇವರು ಕೇವಲ ಯೋಜನೆಗಳನ್ನು ಘೋಷಣೆ ಮಾಡುತ್ತಾರೆಯೇ ವಿನಃ ಅವುಗಳನ್ನು ಕಾರ್ಯರೂಪಕ್ಕೆ ತಂದು ಜನರ ಬದುಕಿಗೆ ಸಹಾಯ ಮಾಡಿದ್ದು ತುಂಬಾ ಕಡಿಮೆ. ಹೀಗಾಗಿ ಈ ಚುನಾವಣಾ ಬಜೆಟ್ ಕೂಡಾ ನುಡಿದಂತೆ ನಡೆಯದ ಇವರ ಈ ಹಿಂದಿನ ಬಜೆಟ್ ಸಾಲಿಗೇ ಸೇರುತ್ತದೆ ಅಷ್ಟೇ ಎಂದು ಹೇಳಿದರು.