Friday, April 18, 2025
Google search engine

Homeರಾಜ್ಯಸುದ್ದಿಜಾಲಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಪರ, ಜನೋಪಯೋಗಿ ಕಾರ್ಯ: ಕೆ.ಟಿ.ಮೋಹನ್ ಕುಮಾರ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜನಪರ, ಜನೋಪಯೋಗಿ ಕಾರ್ಯ: ಕೆ.ಟಿ.ಮೋಹನ್ ಕುಮಾರ್

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮಾಂತರ ಪ್ರದೇಶಗಳ ಜನರಿಗೆ ಅತ್ಯುಪಯುಕ್ತವಾದ ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿದೆ ಎಂದು ಪತ್ರಕರ್ತ
ಕೆ.ಟಿ.ಮೋಹನ್ ಕುಮಾರ್ ಹೇಳಿದರು.

ಸಾಲಿಗ್ರಾಮ ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಆಯೋಜಿಸಿದ್ದ ಡೈರಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಾಲೂಕಿನಲ್ಲಿ ಸಾವಿರಾರು ಸ್ವ ಸಹಾಯ ಸಂಘಗಳನ್ನು ಹೊಂದಿರುವ ಯೋಜನೆಯು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಅದರ ಮೂಲಕ ಮಹಿಳೆಯರು, ಪುರುಷರು, ರೈತರು, ಯುವಕರುಗಳನ್ನು ಜಾಗೃತಿಗೊಳಿಸಿ, ಅವರುಗಳನ್ನು ಸಬಲರನ್ನಾಗಿ ಮಾಡುವುದರ ಜೊತೆಗೆ ಅವರುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಜಾಗೃತಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಮಾಡುವ ಮೂಲಕ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವುದು, ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಮದ್ಯಪಾನಕ್ಕೆ ದಾಸರಾಗಿರುವವರನ್ನು ಅದನ್ನು ತ್ಯಜಿಸಿ ನವ ಜೀವನವನ್ನು ಆರಂಭಿಸಲು ಅನುಕೂಲ ವಾಗುವಂತಹ ಕಾರ್ಯಕ್ರಮಗಳನ್ನ ನಡೆಸುತ್ತ ಹಲವರ ಬದುಕಿಗೆ ಯೋಜನೆಯು ದಾರಿದೀಪವಾಗಿದೆ ಎಂದರು.

ನಿರ್ಗತಿಕರಿಗೆ ಮಾಸಾಸನವನ್ನು ನೀಡುವುದು, ವಿಶೇಷ ಚೇತನರಿಗೆ ಅನುಕೂಲ ವಾಗುವಂತಹ ಪರಿಕರಗಳನ್ನು ನೀಡುವುದು, ಸಮುದಾಯ ಭವನಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕ ನೆರವನ್ನು ನೀಡುವ ಕಾರ್ಯವನ್ನು ಮಾಡುವುದರ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನಪರ, ಜನೋಪಯೋಗಿ ಕಾರ್ಯವನ್ನು ಮಾಡುತ್ತಿದೆ ಎಂದರು.

ಪ್ರತಿವರ್ಷವೂ ಯೋಜನೆ ವತಿಯಿಂದ ತಾಲೂಕಿನ ಎಲ್ಲಾ ಪತ್ರಕರ್ತರುಗಳಿಗೂ ವರ್ಷದ ಮೊದಲ ಭಾಗವಾಗಿ ಡೈರಿಗಳನ್ನು ವಿತರಿಸಿ ಶುಭಾಶಯಗಳನ್ನು ಕೋರುವ ಕಾರ್ಯ ಮಾಡುವ ಮೂಲಕ ಮಾಧ್ಯಮ ಬಂಧುಗಳೊಂದಿಗೆ ಉತ್ತಮ ಬಾಂಧವ್ಯವನ್ನು ಯೋಜನೆಯ ಪದಾಧಿಕಾರಿಗಳು ಹೊಂದಿದ್ದು ತಾಲೂಕಿನಲ್ಲಿ ಯೋಜನೆ ವತಿಯಿಂದ ನಡೆಯುವ ಎಲ್ಲಾ ಜನಪರ ಕಾರ್ಯಕ್ರಮಗಳ ಬಗ್ಗೆ ಪತ್ರಕರ್ತರುಗಳು ಬೆಳಕು ಚೆಲ್ಲುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದು ಮುಂದಿನ ದಿನಗಳಲ್ಲಿಯೂ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ಪತ್ರಕರ್ತರಾದ ಎಂ.ಪಿ.ಮಂಜುನಾಥ್, ಹರ್ಷವರ್ಧನ, ಯೋಜನೆಯ ಹಣಕಾಸು ಪ್ರಬಂಧಕ ಚಾಮರಾಜು, ಆಡಳಿತ ಸಹಾಯಕ ಪ್ರಬಂಧಕಿ ಯಶಸ್ವಿ ಹಾಗೂ ಕಚೇರಿಯ ಸಿಬ್ಬಂದಿಗಳು ಇದ್ದರು.

RELATED ARTICLES
- Advertisment -
Google search engine

Most Popular