Sunday, April 20, 2025
Google search engine

Homeರಾಜ್ಯಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಭಾಷೆ, ನೆಲ, ಜಲವನ್ನು ಸಂರಕ್ಷಣೆ ಮಾಡಿಕೊಂಡು ಹೋಗುವ ಕೆಲಸ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ. ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ ಎಂದು ಮುಖ್ಯಮಂತ್ರಿ ಸಿದ್ದಾಮಯ್ಯ ಕರೆ ನೀಡಿದರು.

ಅವರು ಇಂದು ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಅಂಗವಾಗಿ ವಿಧಾನಸೌಧದ ಪಶ್ಚಿಮದ್ವಾರದ ಬಳಿ ನಾಡದೇವಿ ಭುವನೇಶ್ವರಿ ದೇವಿಯ ಕಂಚಿನ ಪ್ರತಿಮೆ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿದ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.

ಮಾತೃಭಾಷೆಯಲ್ಲಿ ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು: ಪ್ರತಿಯೊಬ್ಬರೂ ಕೂಡ ಕರ್ನಾಟಕದಲ್ಲಿ ಬಾಳಿ ಬದುಕುವವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತೇನೆ. ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡುವುದಿಲ್ಲ ಎಂದು ತೀರ್ಮಾನ ಮಾಡಬೇಕು. ಕನ್ನಡಿಗರು ಉದಾರಿಗಳು. ಹಾಗಾಗಿಯೇ ಬೇರೆ ಭಾಷೆ ಮಾತನಾಡುವವರೂ ಕೂಡ ಕನ್ನಡ ಕಲಿಯದೆ ಬದುಕುವ ವಾತಾವರಣ ಕರ್ಣಾಟಕದಲ್ಲಿದೆ. ತಮಿಳುನಾಡು , ಆಂಧ್ರ, ಕೇರಳಕ್ಕೆ ಹೋದರೆ ಅವರ ಮಾತೃಭಾಷೆಯಲ್ಲಿಯೇ ಮಾತನಾಡುತ್ತಾರೆ. ನಾವೂ ಕೂಡ ನಮ್ಮ ಮಾತೃಭಾಷೆಯಲ್ಲಿಯೇ ವ್ಯವಹರಿಸಬೇಕು. ಅದು ನಮಗೆ ಹೆಮ್ಮೆಯ ವಿಷಯವಾಗಬೇಕು. ಅದರಲ್ಲಿ ಕೀಳರಿಮೆ ಅಗತ್ಯವಿಲ್ಲ ಎಂದರು.

ಕರ್ನಾಟಕದಲ್ಲಿ ವಾಸ ಮಾಡುವವರು ಕನ್ನಡ ಕಲಿಯಬೇಕು: ಕನ್ನಡದ ವಾತಾವರಣ ನಿರ್ಮಾಣ ಮಾಡುವುದು ನಮ್ಮೆಲ್ಲರ ಕರ್ತವ್ಯ.ಅದಕ್ಕಾಗಿ ಇಲ್ಲಿ ವಾಸ ಮಾಡುವವರೆಲ್ಲಾರೂ ಕನ್ನಡವನ್ನು ಕಲಿಯಲೇಬೇಕು. ಹಾಗೆಂದು ನಾವು ಸುಮ್ಮನಿರುವಂತಿಲ್ಲ. ಕನ್ನಡಿಗರು ದುರಭಿಮಾನಿಗಳಲ್ಲ. ಆದರೆ ಕನ್ನಡದ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ದುರಭಿಮಾನಿಗಳಂತೆ ನಾವು ಆಗಬೇಕಿಲ್ಲ. ಆದರೆ ನಮ್ಮ ಭಾಷೆ, ನೆಲ, ನಾಡಿನ ಬಗೆ ಗೌರವ, ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದರು.

೨೦೨೩, ನವೆಂಬರ್ ೦೧ ರಂದು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷಗಳ ತುಂಬಿವೆ. ಈ ಸಂದರ್ಭದಲ್ಲಿ ಇಡಿ ವರ್ಷ ಕರ್ನಾಟಕ ಸಂಭ್ರಮ ಎಂಬ ಹೆಸರಿನಡಿ ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಘೋಷವಾಕ್ಯ ವನ್ನು ಇಟ್ಟು ಇಡೀ ವರ್ಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ನವೆಂಬರ್ ೦೧ ೨೦೨೩ ರಂದು ಹಂಪಿಯಿಂದ ಕಾರ್ಯಕ್ರಮ ಪ್ರಾರಂಭವಾಗಿತ್ತು. ಗದಗಿನಲ್ಲಿಯೂ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾಮಕರಣವಾದ ನಂತರ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಅಲ್ಲಿಗೆ ಭೇಟಿ ನೀಡಿದ್ದರು. ಅವರ ಕಾಲದಲ್ಲಿಯೇ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಗಿದೆ. ಅಲ್ಲಿಯವರೆಗೆ ಮೈಸೂರು ರಾಜ್ಯ ಎಂದಿತ್ತು. ತಾಯಿ ಭುವನೇಶ್ವರಿಯ ಪೂಜೆ ಯನ್ನು ಬಹಳ ವರ್ಷಗಳಿಂದ ರಾಜಮಹಾರಾಜರು ಮಾಡಿಕೊಂಡು ಬರುತ್ತಿದ್ದಾರೆ. ಕರ್ನಾಟಕದಲ್ಲಿಯೂ ತಾಯಿ ಭುವನೇಶ್ವರಿಯ ಪೂಜೆ ಮಾಡುತ್ತೇವೆ. ಏಕೀಕರಣದ ನಂತರ ಅದಕ್ಕೂ ಮುನ್ನವೇ ಪೂಜೆ ಮಾಡಿ ಗೌರವಿಸಿ, ಸ್ಮರಿಸುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ ಎಂದರು.

RELATED ARTICLES
- Advertisment -
Google search engine

Most Popular