ಶಿವಮೊಗ್ಗ: ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಸದೇ ಒಂದೇ ಸೂರಿನಡಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ ಆಡಳಿತ ಸೌಧ ನಿರ್ಮಿಸಲಾಗಿದ್ದು, ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನುಡಿದರು.
ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸಾಗರ ತಾಲ್ಲೂಕಿನ ನೂತನ ಆಡಳಿತ ಸೌಧ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಪದೇ ಪದೇ ಸರ್ಕಾರಿ ಕಚೇರಿ ಅಲೆಯುವುದನ್ನು ಅಧಿಕಾರಿಗಳು ತಪ್ಪಿಸಬೇಕು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಒದಗಿಸಬೇಕು ಎಂದರು.
ಸರ್ಕಾರ ರಚನೆ ಆಗುವ ಪೂರ್ವದಲ್ಲಿ ನೀಡಲಾಗಿದ್ದ ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಯಶಸ್ವಿಯಾಗಿ ಜಾರಿಗೆ ತಂದಿದೆ. ಸರ್ಕಾರ ನುಡಿದಂತೆ ನಡೆದು ತನ್ನ ಮಾತನ್ನು ಉಳಿಸಿಕೊಂಡಿದೆ. ಇನ್ನು ಮುಂದೆ ಅಭಿವೃದ್ದಿ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಸರ್ಕಾರ 57 ಸಾವಿರ ಕೋಟಿಯನ್ನು ಬಡವರ ಮಡಿಲಿಗೆ ಹಾಕಿದೆ. ಬಡವರಿಗೆ ಹಣ ನೀಡಿದರೆ ಅವರು ಖರ್ಚು ಮಾಡು ಪುನಃ ಸರ್ಕಾರಕ್ಕೆ ಅನುಕೂಲವಾಗುವಂತೆ ಮಾಡುತ್ತಾರೆ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ.
ಇದೀಗ ತಾನೆ ಸೊರಬ ತಾಲ್ಲೂಕಿನ ಭೈರೇಕೊಪ್ಪದಲ್ಲಿ ರೂ. 18 ಕೋಟಿ ಮೊತ್ತದ ನಾರಾಯಣ ಗುರು ವಸತಿ ಶಾಲೆಗೆ ಗುದ್ದಲಿಪೂಜೆ ನೆರವೇರಿಸಿ ಬಂದಿದ್ದೇನೆ. ಹಾಗೂ ಸಾಗರ ತಾಲ್ಲೂಕಿನ ಗೆಣಸಿನಕುಣಿಯಲ್ಲಿ ರೂ.18 ಕೋಟಿ ಅಂದಾಜು ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಶಂಕುಸ್ಥಾಪನೆ ಮಾಡಲಾಗುವುದು. ನನ್ನ ಇಲಾಖೆಗೆ ಸರ್ಕಾರ 44,500 ಕೋಟಿ ಅನುದಾನ ಒದಗಿಸಿದೆ. ನಮ್ಮ ಸರ್ಕಾರ ಬಡಜನತೆಗೆ ನೀಡಿರುವ ಐದು ಗ್ಯಾರಂಟಿಗಳು ಅತ್ಯಂತ ಉಪಯುಕ್ತವಾಗಿದ್ದು ನಿಜವಾಗಿ ಜನರಿಗೆ ಬದಕಲು ಅವಕಾಶ ಮಾಡಿಕೊಟ್ಟಿದೆ ಎಂದರು.
ಬಗರ್‍ಹುಕುಂ ರೈತರಿಗೆ ನ್ಯಾಯ ಸಿಗಬೇಕು. ಕಾಗೋಡು ತಿಮ್ಮಪ್ಪನವರು ಬಗರ್‍ಹುಕುಂ ರೈತರ ಪರ ಹೋರಾಡಿ ಹಕ್ಕು ನೀಡಲು ಪ್ರಯತ್ನಿಸಿದ್ದರು. ಅದರ ಫಲವಾಗಿ ಇಂದಿಗೂ ಭೂಮಿ ಹಂಚಿಕೆ ಆಗುತ್ತಿದೆ. ಬಗರ್‍ಹುಕುಂ ರೈತರ, ಶರಾವತಿ ಮುಳುಗಡೆ ಸಂತ್ರಸ್ತರ ರಕ್ಷಣೆ ಕುರಿತು ಸರ್ಕಾರ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಉಸ್ತುವಾರಿ ಸಚಿವರು ಸಹ ಅವರ ಹಕ್ಕುಗಳ ರಕ್ಷಣೆಗಾಗಿ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಮುಳುಗಡೆ ರೈತರು ಕಷ್ಟದಲ್ಲಿದ್ದು ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದ ಅವರು ಉಸ್ತುವಾರಿ ಸಚಿವರು ತಮ್ಮ ಇಲಾಖೆಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಜನಪರವಾಗಿ ಮುಂದುವರೆಯಲಿದ್ದಾರೆ ಎಂದರು.