ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಗೃಹ ಜ್ಯೋತಿ, ಗೃಹಲಕ್ಷ್ಮೀ, ಅನ್ನ ಭಾಗ್ಯ,ಯುವ ನಿಧಿ ಹಾಗೂ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಗ್ಯಾರಂಟಿ ಯೋಜನೆಗಳನ್ನು ಒಂದೊಂದೇ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಈ ನಡುವೆ ಗ್ಯಾರೆಂಟಿ ಭಾಗ್ಯಗಳಿಗೆ ಅಗತ್ಯ ದಾಖಲೆಗಳನ್ನು ನೀಡಲು ನಾಗರಿಕರು ಆಧಾರ್ ಕಾರ್ಡ್, ಕುಟುಂಬ ಪಡಿತರ ಚೀಟಿ, ಪಾನ್ ಕಾರ್ಡ್ ಮೊದಲಾದ ಅಗತ್ಯ ದಾಖಲೆಗಳನ್ನು ಸಿದ್ಧ ಪಡಿಸಿ ಕೊಳ್ಳಲು ಹಾತೊರೆಯುತ್ತಿರುವ ದೃಶ್ಯಗಳು ಸಾಮಾನ್ಯ ವಾಗಿವೆ.
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಹೆಚ್ಚಳ: ಇನ್ನು ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳಿಗೆ ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿ ಅಗತ್ಯವಾಗಿ ರುವುದರಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಗಳನ್ನು ಸಲ್ಲಿಸುವುದು ಹೆಚ್ಚಾಗಿದೆ. ಗೃಹ ಜ್ಯೋತಿ ಯೋಜನೆಗೆ ಪ್ರತಿ ಫಲಾನುಭವಿಯು ತನ್ನ ಕಸ್ಟಮರ್ ಐಡಿ ಅಥವಾ ಅಕೌಂಟ್ ಐಡಿ ಅನ್ನು ಆಧಾರ್‌ಗೆ ಕಡ್ಡಾಯವಾಗಿ ಜೋಡಣೆ ಮಾಡಬೇಕಿದ್ದು, ಈ ಪ್ರಕ್ರಿಯೆ ಮಾಡಿಸಲು ಅಲೆದಾಟ ಶುರುವಾಗಿದೆ. ಇನ್ನು ಯುವ ನಿಧಿಗಾಗಿ ಪಡೆಯುವ ನಿರುದ್ಯೋಗ ಭತ್ಯೆ ಪಡೆಯಲು ಪದವಿ ವ್ಯಾಸಂಗ ಪತ್ರ, ಆಧಾರ್, ವಾಸ ದೃಢೀಕರಣ ಮೊದಲಾದ ದಾಖಲೆಗಳನ್ನು ಹವಣಿಸಿಟ್ಟುಕೊಳ್ಳಬೇಕಿದೆ. ಶಕ್ತಿ ಯೋಜನೆ ಯಡಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಪೂರಕವಾಗುವ ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಿದೆ.
ಯಾರು ಫಲಾನುಭವಿಗಳು ಎನ್ನುವ ಚರ್ಚೆ ? : ಜುಲೈ 1ರಿಂದ ಜಾರಿಯಾಗಲಿರುವ ಗೃಹ ಜ್ಯೋತಿ ಯೋಜನೆಗೆ 200 ಯೂನಿಟ್‌ಗಳ ವರೆಗೆ ವಿದ್ಯುತ್ ಉಚಿತವಾಗಿ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸ ಬೇಕು. ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ, ಒಂದು ಆರ್‌ಆರ್ ಸಂಖ್ಯೆಗೆ ಮಾತ್ರ ಸೌಲಭ್ಯ ಕಲ್ಪಿಸುವುದಾಗಿ ಹೇಳಿರುವುದರಿಂದ ಬಾಡಿಗೆ ಮನೆಯಲ್ಲಿರು ವವರು ಈ ಸೌಲಭ್ಯಗಳಿಂದ ವಂಚಿತರಾಗುವ ಸಂಭವವಿದ್ದು, ಮನೆ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಚರ್ಚೆ ಆರಂಭವಾಗಿದೆ. ಸರ್ಕಾರ ಬಾಡಿಗೆದಾರರಿಗೂ ಯೋಜನೆ ಅನ್ವಯಿಸುತ್ತದೆ ಎನ್ನುವ ಹೇಳಿಕೆ ನೀಡಿದ್ದರೂ ಮಾಪಕಗಳ ಗೊಂದಲಗಳಿಂದ ಸೌಲಭ್ಯಗಳು ಕೈ ತಪ್ಪುವ ಆತಂಕ ಎದುರಾಗಿದೆ.