ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ನಿವೇಶನಗಳಿಗೆ ‘ಬಿ’-ಖಾತಾ ನೀಡುವ ಅವಧಿಯನ್ನು ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.
ಅನಧಿಕೃತ ಕಟ್ಟಡಗಳು ಎಂದರೆ ಯಾವುದೇ ಪರವಾನಗಿ, ನಕ್ಷೆ ಮಂಜೂರಾತಿ ಇಲ್ಲದೆ ಕಂದಾಯ ನಿವೇಶನಗಳಲ್ಲಿ ನಿರ್ಮಾಣವಾಗಿರುವ ಕಟ್ಟಡಗಳು. ಇಂತಹ ಕಟ್ಟಡಗಳಿಗೆ ಬಿ-ಖಾತಾ ನೀಡಿ ಸಕ್ರಮಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನಿರ್ಧಾರ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಾಗರಿಕರಿಗೆ ಬಿ-ಖಾತಾ ಪಡೆಯಲು ಮೇ 10ರ ವರೆಗೆ ಅವಕಾಶವಿತ್ತು.
ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ಅನಧಿಕೃತ ಕಟ್ಟಡಗಳಿವೆ ಎಂದು ಅಂದಾಜಿಸಲಾಗಿದೆ. ಈಗಾಗಲೇ 10 ಲಕ್ಷ ಆಸ್ತಿಗಳ ಮಾಲೀಕರು ಅರ್ಜಿ ಸಲ್ಲಿಸಿದ್ದು, 2 ಲಕ್ಷ ಬಿ-ಖಾತೆಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ.
ಮತ್ತಷ್ಟು ನಾಗರಿಕರಿಗೆ ಈ ಸೌಲಭ್ಯ ಲಭ್ಯವಾಗುವಂತೆ ಮಾಡಲು ಬಿ-ಖಾತಾ ವಿತರಣೆ ಅವಧಿಯನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ. ಜಿಪಿಎ ಅಥವಾ ಕರಾರುದಾರರಿಗೂ ಬಿ-ಖಾತಾ ನೀಡಲು ಚರ್ಚೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.