ಪಿರಿಯಾಪಟ್ಟಣ: ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಗ್ರಾಮಾಂತರ ಪ್ರದೇಶದ ಭುವನಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಜಯಶೀಲರಾಗುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಬೆಟ್ಟದಪುರದಲ್ಲಿ ನಡೆದ 2025 – 26 ನೇ ಸಾಲಿನ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು, ಈ ವೇಳೆ ಮುಖಂಡರಾದ ಬಿ.ಕೆ ನಾಗೇಂದ್ರಪ್ಪ ಅವರು ಮಾತನಾಡಿ ಈಚಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಡ್ದು ಹೊಡೆದು ವಿವಿಧ ಹಂತಗಳಲ್ಲಿ ಜಯಶೀಲರಾಗುವುದರ ಜೊತೆಗೆ ಉತ್ತಮ ಫಲಿತಾಂಶ ಪಡೆವ ಮೂಲಕ ತಮ್ಮಲ್ಲಿನ ಪ್ರತಿಭೆ ಹೊರ ತರುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
ಮುಖ್ಯ ಶಿಕ್ಷಕಿ ಸರೋಜಾ ಅವರು ಮಾತನಾಡಿ ಶಿಕ್ಷಕರೆಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಣಾಸಕ್ತರ ಮಾರ್ಗದರ್ಶನದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿನ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಸಾಂಸ್ಕೃತಿಕ ಸೇರಿದಂತೆ ಹಲವು ಚಟುವಟಿಕೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ವಿವಿಧ ಹಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ಅವರಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ವಿವಿಧ ಆಟೋಟಗಳ ವಿಜೇತರು : ಬಾಲಕ ಹಾಗು ಬಾಲಕಿಯರ ಖೋ ಖೋ ಪ್ರಥಮ, ಬಾಲಕರ ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಬಾಲಕರ ವಿಭಾಗದಲ್ಲಿ 3000 ಮೀ.ಓಟ ತೃತೀಯ, 800 ಮೀ. ಪ್ರಥಮ, 400 ಮೀ. ಪ್ರಥಮ, 200 ಮೀ. ಪ್ರಥಮ, ಉದ್ದ ಜಿಗಿತ ದ್ವಿತೀಯ, ತ್ರಿವಿದ ಜಿಗಿತ ದ್ವಿತೀಯ, ಗುಂಡು ಎಸೆತ ತೃತೀಯ, ಜಾವಲಿನ್ ತೃತೀಯ, ಬಾಲಕಿಯರ ವಿಭಾಗದಲ್ಲಿ 1500 ಮೀ. ಪ್ರಥಮ, 800 ಮೀ. ದ್ವಿತೀಯ, 200 ಮೀ. ದ್ವಿತೀಯ, 100 ಮೀ. ತೃತೀಯ, ಉದ್ದ ಜಿಗಿತ ದ್ವಿತೀಯ, ತ್ರಿವಿದ ಜಿಗಿತ ತೃತೀಯ, ಜಾವಲಿನ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಶೇಖರ್, ಮಾಜಿ ಅಧ್ಯಕ್ಷ ಹೇಮಪ್ರಭ, ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಬಿ.ವಿ ಗಿರೀಶ್, ಹಾಗೂ ಶಾಲೆಯ ಶಿಕ್ಷಕರು ಇದ್ದರು.