ವರದಿ: ರವಿಚಂದ್ರ ಬೂದಿತಿಟ್ಟು
ಪಿರಿಯಾಪಟ್ಟಣ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷ ಕಳೆದರೂ ತಾಲ್ಲೂಕು ಅಭಿವೃದ್ಧಿ ಕಾಣದೆ, ತಾಲೂಕಿನ ಆಡಳಿತ ವ್ಯವಸ್ಥೆ ಕುಸಿದಿದೆ ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.
ತಾಲ್ಲೂಕಿಗೆ ಆಗಮಿಸುತ್ತಿರುವ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ರೂಪಿಸುವ ಸಲುವಾಗಿ ಪಟ್ಟಣದ ಮಂಜುನಾಥ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಮಾತನಾಡಿದರು. 48 ವರ್ಷಗಳಿಂದ ಈ ತಾಲ್ಲೂಕಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ, ಪಕ್ಷವನ್ನು ಯಾವ ಸಮಯದಲ್ಲಿ ಚುನಾವಣೆಗೆ ತಯಾರು ಮಾಡಬೇಕು, ಕಾರ್ಯಕರ್ತರ ಸಂಘಟನೆ ಯಾವಾಗ ಮಾಡಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ, ಆದರೆ ಕೆಲವರು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದು ನನ್ನ ಗಮನಕ್ಕೆ ಬಂದಿದ್ದು ಪಕ್ಷ ಒಡೆಯುವ ಕೆಲಸ ಮಾಡಬಾರದು ಎಂದು ಯಾರ ಹೆಸರನ್ನು ಹೇಳದೆ ಬೇಸರ ವ್ಯಕ್ತಪಡಿಸಿದರು. ಕೆಲವರು ಪಕ್ಷ ವಿರೋಧಿ ಚಟುವಟಿಕೆ ಮಾಡಿರುವವರನ್ನು ನಾನು ಕ್ಷಮಿಸಿದ್ದೇನೆ, ಇನ್ನು ಮುಂದೆ ಈ ರೀತಿ ಆಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎರಡು ವರ್ಷಗಳ ನಂತರ ಪ್ರಥಮ ಬಾರಿಗೆ ತಾಲೂಕಿಗೆ ನಿಖಿಲ್ ಕುಮಾರಸ್ವಾಮಿ ಅವರು ಆಗಮಿಸುತ್ತಿದ್ದು, ಕಾರ್ಯಕರ್ತರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು. ಮುಂದಿನ ಚುನಾವಣೆ ಕಠಿಣವಾಗಲಿದೆ, ಮುನ್ನೆಚ್ಚರಿಕೆಯಿಂದ ಪಕ್ಷ ಸಂಘಟನೆ ಮಾಡಿ, ಗೆಲುವು ಸಾಧಿಸು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಪಕ್ಷದ ನಾಯಕತ್ವ ಯಾರು ವಹಿಸಬೇಕು ಎನ್ನುವ ವಿಚಾರ ಮುಂದಿನ ದಿನದಲ್ಲಿ ಚರ್ಚಿಸಿ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಮುಖಂಡರಾದ ಎಸ್.ರಾಮು, ವೆಂಕಟೇಶ್, ರಂಗಸ್ವಾಮಿ ಮತ್ತು ಕೆಲವರು ಮಾತನಾಡಿ ಕೆ.ಮಹದೇವ್ ಮತ್ತು ಅವರ ಮಗ ಪಿ.ಎಂ.ಪ್ರಸನ್ನ ಅವರಲ್ಲಿ ಯಾರು ಪಕ್ಷದ ನಾಯಕತ್ವ ವಹಿಸಿಕೊಳ್ಳುತ್ತಾರೆ ಎಂಬುದು ನಮಗೆ ಮುಖ್ಯವಲ್ಲ, ಇಬ್ಬರು ಪಕ್ಷದ ಕಣ್ಣುಗಳಿದ್ದಂತೆ ಇಬ್ಬರು ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ನಾವು ಇಲ್ಲಿ ಗೆಲುವು ಸಾಧಿಸಲು ಮತ್ತು ಪಕ್ಷ ಸಂಘಟನೆ ಮಾಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೈಮುಲ್ ಮಾಜಿ ಅಧ್ಯಕ್ಷ ಮತ್ತು ಮಾಜಿ ಶಾಸಕ ಕೆ.ಮಹದೇವ್ ಅವರ ಪುತ್ರ ಪಿ.ಎಂ.ಪ್ರಸನ್ನ ಮಾತನಾಡಿ ಸೆ. 14 ರ ಕಾರ್ಯಕ್ರಮ ಮಾಜಿ ಶಾಸಕ ಕೆ.ಮಹದೇವ್ ಅವರ ನೇತೃತ್ವದಲ್ಲೇ ನಡೆಯಲಿದೆ, ಇದರ ಬಗ್ಗೆ ಅವರಿಗೂ ಸೇರಿದಂತೆ ಕಾರ್ಯಕರ್ತರಿಗೆ ಸಂಶಯ ಬೇಡ ನಾನು ಸಹ ಪಕ್ಷಕ್ಕೆ ಹಗಲು ರಾತ್ರಿ ದುಡಿಯುತ್ತಿದ್ದೇನೆ ಕಾರ್ಯಕರ್ತರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ, ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ವಯಸಿದಲ್ಲಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಿಗೆ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಲಿಸಿಕೊಂಡು ಬರುವ ಕೆಲಸ ಮಾಡುತ್ತೇನೆ ಎಂದರು. ನಿಖಿಲ್ ಕುಮಾರಸ್ವಾಮಿ ಅವರ ಕಾರ್ಯಕ್ರಮ ಎರಡುವರೆ ವರ್ಷಗಳ ನಂತರ ತಾಲೂಕಿನಲ್ಲಿ ನಡೆಯುತ್ತಿದ್ದು ಇದು ಜೆಡಿಎಸ್ ನಿಂದ ನಡೆಯುವ ದೊಡ್ಡ ಕಾರ್ಯಕ್ರಮವಾಗಬೇಕು ಹತ್ತು ಸಾವಿರ ಜನರನ್ನು ಸೇರಿಸೋಣ ಅವರಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದು. ಸಚಿವ ಕೆ.ವೆಂಕಟೇಶ್ ಅವರಿಂದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಮುಗಿಸುವ ಕೆಲಸವಾಗುತ್ತಿದೆ, ಇದನ್ನು ಸಮರ್ಥವಾಗಿ ಎದುರಿಸಲು ನಾವು ಒಗ್ಗಟ್ಟಿನಿಂದ ಇರಬೇಕು ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಣ್ಣಯ್ಯ ಶೆಟ್ಟಿ, ರಾಜೇಂದ್ರ, ಶಿವಣ್ಣ, ಸೋಮಶೇಖರ್, ಕುಮಾರ್, ಡಿ.ಎ.ನಾಗೇಂದ್ರ, ಮಾನು, ಜೆ.ಎಸ್.ನಾಗರಾಜ್, ಚಂದ್ರಶೇಖರ್, ಗಗನ್, ಪ್ರೀತಿ ಅರಸ್, ಪುರಸಭೆ ಅಧ್ಯಕ್ಷ ಪ್ರಕಾಶ್ ಸಿಂಗ್, ಸದಸ್ಯರಾದ ಮಂಜುನಾಥ್ ಸಿಂಗ್, ಮಹೇಶ್, ಎಂ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ರವಿ, ಕುಮಾರ್, ಕಿರಂಗೂರು ಮಹದೇವ್, ಕಿರನಲ್ಲಿ ಮುತ್ತುರಾಜು, ಪರಮೇಶ್, ಸತೀಶ್, ಕುಮಾರ್, ರಘು, ಗಿರೀಶ್, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.