ಬೆಂಗಳೂರು : ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ಸಂಬಂಧ ಈಗಾಗಲೇ ಪರ ವಿರೋಧ ವಿಚಾರವಾಗಿ ಬಹಳ ಚರ್ಚೆಯಾಗುತ್ತಿದೆ. ಜಾತಿ ಗಣತಿಯನ್ನು ವರದಿ ಪ್ರಶ್ನಿಸಿ ಕೆಲವರು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ವಿಚಾರಣೆ ಬಳಿಕ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಜುಲೈ 17 ಕ್ಕೆ ಮುಂದೂಡಿತು.
ಈ ಸಂಬಂಧ ಏನಿದ್ದರೂ ಪ್ರತ್ಯೇಕ ಮಧ್ಯಂತರ ಅರ್ಜಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ. ಬೀದರ್‌ನ ಶಿವರಾಜ ಕಣಶೆಟ್ಟಿ, ಕೆ.ಸಿ. ಶಿವರಾಂ, ಬೆಂಗಳೂರಿನ ಬುಜೇಂದ್ರ, ನಟ ಮುಖ್ಯಮಂತ್ರಿ ಚಂದ್ರು ಹಾಗೂ ಬೆಂಗಳೂರಿನ ‘ಸಮಾಜ ಸಂಪರ್ಕ ವೇದಿಕೆ’ ಅಧ್ಯಕ್ಷ ಜಿ.ಎನ್.ಶ್ರೀಕಂಠಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯ ಮೂರ್ತಿ ಎನ್.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಾದ ಪ್ರತಿವಾದ ಬಳಿಕ ನ್ಯಾಯಪೀಠ ಎರಡು ಕಡೆಯ ವಕೀಲರ ವಿವರಣೆಯನ್ನು ಲೆಕ್ಕಿಸದೆ ವಿಚಾರಣೆಯನ್ನು ಜುಲೈ 17 ಕ್ಕೆ ಮುಂದೂಡಿತು. ಕಳೆದ ವಿಚಾರಣೆ ವೇಳೆ ನ್ಯಾಯಾಲಯ, ‘ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಜಾತಿ ಗಣತಿ ಕುರಿತು ಸರಕಾರ ಮುಂದಿನ ವಿಚಾರಣೆ ವೇಳೆಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ’ ಎಂದು ಸೂಚನೆ ನೀಡಿತ್ತು.