ಗುಂಡ್ಲುಪೇಟೆ: ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಂಚಹಳ್ಳಿ ಗ್ರಾಮದ ರೈತ ಮುಖಂಡರು ಬಂಡೀಪುರ ಅಭಯಾರಣ್ಯ ಓಂಕಾರ ವಲಯದ ಆರ್‍ಎಫ್‍ಓ ಸತೀಶ್‍ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಹರೀಶ್ ಮಾತನಾಡಿ, ಮಂಚಹಳ್ಳಿ ಗ್ರಾಮದ ಸುತ್ತಮುತ್ತಲು ಕಾಡಾನೆ ಹಾವಳಿ ಹೆಚ್ಚಿದ್ದು, ರಾತ್ರಿ ವೇಳೆ ಜಮೀನುಗಳಿಗೆ ಲಗ್ಗೆಯಿಟ್ಟು, ಫಸಲನ್ನು ತುಳಿದು ತಿಂದು ನಾಶ ಪಡಿಸುತ್ತಿವೆ. ಇದರಿಂದ ಟೊಮ್ಯಾಟೊ, ಬೀನ್ಸ್, ಮಂಗಳೂರು ಸೌತೆ, ಮೆಣಿಸಿನ ಬೆಳೆ, ಜೋಳ ಹತ್ತಿ ಇತ್ಯಾದಿ ಬೆಳೆಗಲು ರೈತರ ಕೈಸೇರುತ್ತಿಲ್ಲ. ಕಾಡಾನೆಗಳು ಸೋಲಾರ್ ತಂತಿಯನ್ನು ತಿಳಿದು ಬರುತ್ತಿರುವ ಕಾರಣ ಅದರಿಂದಲೂ ಆರ್ಥಿಕ ನಷ್ಟವಾಗುತ್ತಿದೆ. ಮತ್ತೇ ಸೋಲಾರ್ ತಂತಿ ದುರಸ್ತಿ ಪಡಿಸಿಲು ಸಾವಿರಾರು ಹಣ ವ್ಯಯ ಮಾಡಬೇಕಾಗುತ್ತಿದೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವ ಹಿನ್ನೆಲೆ ರೈತ ಫಸಲು ಮಾಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಓಂಕಾರ ವಲಯ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ಕಂದಕಗಳು ಮುಚ್ಚಿ ಹೋಗಿರುವ ಕಾರಣ ಆನೆಗಳ ಹಿಂಡು ಸಲೀಸಾಗಿ ಕಾಡಿನಿಂದ ರೈತರ ಜಮೀನುಗಳಿಗೆ ಲಗ್ಗೆಯಿಟ್ಟು, ಬೆಳೆ ನಾಶಪಡಿಸುತ್ತಿದೆ. ಆದ್ದರಿಂದ ಸಮರ್ಪಕವಾಗಿ ಕಂದಕ ನಿರ್ಮಾಣ ಮಾಡಲು ಕ್ರಮ ವಹಿಸಬೇಕು. ಜೊತೆಗೆ ಕಾಡು ಹಂದಿಗಳ ಹಾವಳಿಯೂ ಹೆಚ್ಚಿದ್ದು, ಇವುಗಳಿಗೂ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ರೈತರ ಮನವಿ ಸ್ವೀಕರಿಸಿ ಮಾತನಾಡಿದ ಓಂಕಾರ ವಲಯದ ಆರ್‍ಎಫ್‍ಓ ಸತೀಶ್, ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಜೊತೆಗೆ ಬೆಳೆ ನಷ್ಟಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಈ ವೇಳೆ ರೈತ ಮುಖಂಡರು ಶಾಸಕ ಎಚ್.ಎಂ.ಗಣೇಶಪ್ರಸಾದ್‍ಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆ ಬಿಚ್ಚಿಟ್ಟರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರು, ಈ ಬಗ್ಗೆ ಸಂಬಂಧಪಟ್ಟ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೌಡಿಕೆ ಮಲ್ಲಪ್ಪ, ಗ್ರಾಪಂ ಸದಸ್ಯ ನಂದೀಶ್, ಪ್ರಕಾಶ್, ಮಾದೇಶ್, ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್, ಮಹದೇವಪ್ಪ, ಮಧು, ಮಧುಸೂಧನ್, ಕಾರ್ತಿಕ್, ಶಿವಪ್ರಕಾಶ್, ಕೆಂಪಣ್ಣ, ಮನೋಜ್ ಕುಮಾರ್, ಮಹೇಶ್ ಸೇರಿದಂತೆ ಹಲವು ಮಂದಿ ರೈತ ಮುಖಂಡರು ಹಾಜರಿದ್ದರು.