ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಹಿನ್ನೆಲೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ವಿಷ್ಣು ಶಂಕರ್ ಜೈನ್ ಈ ಅರ್ಜಿಯನ್ನು ಸಲ್ಲಿಸಿದ್ದು, ರಾಜ್ಯದಲ್ಲಿ ಚುನಾವಣೆಯ ನಂತರದ ಹಿಂಸಾಚಾರ, ಭ್ರಷ್ಟಾಚಾರ, ಮತ್ತು ಆಡಳಿತ ವೈಫಲ್ಯದ ಆರೋಪಗಳನ್ನು ಒಳಗೊಂಡಂತೆ ಹಲವು ವಿಷಯಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾ.ಬಿ.ಆರ್.ಗವಾಯಿ ಮತ್ತು ನ್ಯಾ.ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠದ ಮುಂದೆ ವಕೀಲ ವಿಷ್ಣು ಶಂಕರ್ ಜೈನ್ ಅರ್ಜಿಯನ್ನು ಪ್ರಸ್ತಾಪಿಸಿದರು. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆಯ ಗಂಭೀರ ಕುಸಿತವನ್ನು ತಡೆಗಟ್ಟಲು ರಾಜ್ಯ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ರಾಜ್ಯದ ಜನತೆಯ ಸುರಕ್ಷತೆಗೆ ಧಕ್ಕೆಯುಂಟಾಗಿದೆ. ಈ ಸಂದರ್ಭದಲ್ಲಿ ಭಾರತ ಸಂವಿಧಾನದ 356ನೇ ವಿಧಿಯಡಿಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಂಗಾಳದಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಬೇಕು ಮತ್ತು ಹಿಂಸಾಚಾರದ ತನಿಖೆಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡಿದ ಪೀಠವು, ರಾಷ್ಟ್ರಪತಿ ಆಳ್ವಿಕೆ ಹೇರಲು ರಾಷ್ಟ್ರಪತಿಗಳಿಗೆ ಆದೇಶ ಹೊರಡಿಸಬೇಕೆಂದು ನೀವು ಬಯಸುತ್ತೀರಾ? ಎಂದು ಅರ್ಜಿದಾರರಿಗೆ ಕೇಳಿತು. ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿರುವ ಆರೋಪ ನಮ್ಮ ಮೇಲಿದೆ ಎಂದು ಪರೋಕ್ಷವಾಗಿ ವಕ್ಫ್ ಪ್ರಕರಣದಲ್ಲಿನ ಮಧ್ಯಂತರ ಆದೇಶದ ಟೀಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಲಾಯಿತು. ನಾಳೆ ಅರ್ಜಿಯ ವಿಸ್ತೃತ ವಿಚಾರಣೆ ನಡೆಸುವುದಾಗಿ ಪೀಠ ಹೇಳಿದೆ.
ಏ.11-12 ರಂದು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಬಂಗಾಳದ ಮುರ್ಷಿದಾಬಾದ್‌ನ ಹಲವಾರು ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಇದರಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಜೊತೆಗೆ ಅನೇಕರು ಗಾಯಗೊಂಡಿದ್ದಾರೆ ಎಂಬುದು ಗಮನಾರ್ಹ. ಹಿಂಸಾಚಾರದಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ಸ್ಥಳಾಂತರಗೊಂಡಿದ್ದಾರೆ.