ಹನೂರು: ಮಣಿಪುರ ರಾಜ್ಯದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವುದನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ವತಿಯಿಂದ ನಾಳೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ದಸಂಸ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ತಿಳಿಸಿದರು.
ಪಟ್ಟಣದ ಲೋಕಪಯೋಗಿ ವಸತಿಗೃಹ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬುಧವಾರ ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ವಿವಿಧ ತಾಲೂಕು ಗಳಿಂದ ಸಂಘದ ಪದಾಧಿಕಾರಿಗಳು ಮಹಿಳೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕಳೆದ ಮೂರು ತಿಂಗಳುಗಳಿಂದ ಜನಾಂಗೀಯ ದ್ವೇಷದಿಂದ ಮಣಿಪುರ ತತ್ತರವಾಗಿದೆ. ಇದಕ್ಕೆ ಕಾರಣ ಮಣಿಪುರ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ. ಈ ಹಿನ್ನಲೆಯಲ್ಲಿ ಮಣಿಪುರದ ಸರ್ಕಾರವನ್ನು ವಜಾಗೊಳಿಸಬೇಕೆಂಬುದು ನಮ್ಮ ಆಗ್ರಹ. ಇಂದು ಮಣಿಪುರದಲ್ಲಿ ಇಂತಹ ನೀಚಕೃತ್ಯಗಳು ನಡೆದಿದೆ. ಮುಂದೆ ಬೇರೆ ಎಲ್ಲಿಯಾದರು ಮರುಕಳುಹಿಸಬಹುದು. ಈ ಹಿನ್ನಲೆಯಲ್ಲಿ ಈ ದುಷ್ಕೃತ ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕು. ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರ ಎಸಗಿರುವುದು ಅಮಾನವೀಯ. ಮನುಕುಲವೇ ತಲೆತಗ್ಗಿಸುವ ಕೃತ್ಯವಿದು. ಈ ಕೃತ್ಯದ ಹಿಂದೆ ಬಿಜೆಪಿ ಆರ್ ಎಸ್ ಎಸ್ ಪಾತ್ರವಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ತನಿಖೆಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು, ಮಹಿಳಾಪರ, ಪ್ರಗತಿಪರ ಸಂಘಟನೆಗಳು, ಸಂಘಟನೆಯ ಕಾರ್ಯಕರ್ತರು, ವಿವಿಧ ಮುಖಂಡರುಗಳು, ಹೋರಾಟಗಾರರು ಇದ್ದರು.