ರಾಜಕೀಯ ಪ್ರೇರಿತ ಸಂಚುರೂಪಿಸುತ್ತಿರುವ ಮೋಹನ್ ಕುಮಾರ್ ನಡೆ ಖಂಡನೀಯ
ಪಿರಿಯಾಪಟ್ಟಣ: ಪಟ್ಟಣದ ಪುರಸಭಾ ವ್ಯಾಪ್ತಿಗೆ ಒಳಪಡುವ ಹರವೆ ಮಲ್ಲರಾಜ ಪಟ್ಟಣದಲ್ಲಿನ ಸರ್ವೆ ನಂಬರ್ 14 ರಲ್ಲಿನ ಕೆಲ ಮನೆಗಳ ಮತದಾರರನ್ನು ಪುರಸಭಾ ವ್ಯಾಪ್ತಿಯಿಂದ ಕೈಬಿಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಮನವಿ ನೀಡಿರುವುದಕ್ಕೆ ಹರವೆ ಮಲ್ಲರಾಜಪಟ್ಟಣ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಪುರಸಭಾ ಸದಸ್ಯ ಪ್ರಕಾಶ್ ಸಿಂಗ್ ಅವರು ಮಾತನಾಡಿ 2015 ರಲ್ಲಿ ಹರವೆ ಮಲ್ಲರಾಜಪಟ್ಟಣ ಗ್ರಾಮವನ್ನು ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸಿ ಪುರಸಭಾ ವ್ಯಾಪ್ತಿಗೆ ಸೇರ್ಪಡೆಸಿದ್ದು 2018 ರ ವಿಧಾನಸಭಾ ಚುನಾವಣೆ ತದನಂತರ ನಡೆದ ಪುರಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಈ ವ್ಯಾಪ್ತಿಯ ಗ್ರಾಮಸ್ಥರು ಪುರಸಭಾ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿಯೇ ಮತದಾನ ಮಾಡಿದ್ದರು. ಆದರೆ 2020 ರಲ್ಲಿ ಹರವೆ ಮಲ್ಲರಾಜ ಪಟ್ಟಣದ ಮೋಹನ್ ಕುಮಾರ್ ಎಂಬುವವರು ಕೆಲ ಕುಟುಂಬಗಳನ್ನು ಪುರಸಭೆ ಮತದಾನದ ಹಕ್ಕಿನಿಂದ ಬೇರ್ಪಡಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರ್ಪಡಿಸುವಂತೆ ತಹಶೀಲ್ದಾರ್ ಡಿಸಿ ಅವರಿಗೆ ಮನವಿ ನೀಡಿದ್ದು ಈ ಸಂಬಂಧ ಅಧಿಕಾರಿಗಳು ಸ್ಥಳ ಪರಿಶೀಲಿಸಿದ ಬಳಿಕ ಅಂದಿನ ತಹಶೀಲ್ದಾರ್ ಅವರು ಮನವಿಯನ್ನು ತಿರಸ್ಕರಿಸಿದ್ದರು, ಶಾಸಕರಾಗಿದ್ದ ಕೆ.ಮಹದೇವ್ ಅವರು ಸಹ ಅಭಿವೃದ್ಧಿಗೆ ಸಹಕಾರ ನೀಡಿದ್ದರು ಆದರೂ ಕಳೆದ ಕೆಲ ದಿನಗಳ ಹಿಂದೆ ಮತ್ತೆ ಮೋಹನ್ ಕುಮಾರ್ ಅವರು ಮತದಾನದ ಹಕ್ಕನ್ನು ಗ್ರಾಮ ಪಂಚಾಯಿತಿಗೆ ಸೇರಿಸುವಂತೆ ಮನವಿ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸ್ಥರಾದ ಶಿವಕುಮಾರ್, ಕುಮಾರ್ ಅವರು ಮಾತನಾಡಿ ನಾವುಗಳು ಈಗಾಗಲೇ ಪುರಸಭಾ ವ್ಯಾಪ್ತಿಯಿಂದ ಮೂಲಭೂತ ಸೌಕರ್ಯಗಳನ್ನು ಪಡೆಯುತ್ತಿದ್ದು ಮುಂಬರುವ ದಿನಗಳಲ್ಲಿಯೂ ಪುರಸಭಾ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿಯೇ ಇರುತ್ತೇವೆ ನಮ್ಮ ವಿರುದ್ಧ ರಾಜಕೀಯ ಪ್ರೇರಿತ ಸಂಚುರೂಪಿಸುತ್ತಿರುವ ಮೋಹನ್ ಕುಮಾರ್ ನಡೆ ಖಂಡನೀಯ, ಅಧಿಕಾರಿಗಳು ದುರುದ್ದೇಶದಿಂದ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿಸಲು ತೀರ್ಮಾನಿಸಿದರೆ ನಾವುಗಳು ಬಾಡಿಗೆ ಮನೆಯಲ್ಲಿದ್ದು ಪುರಸಭೆ ವ್ಯಾಪ್ತಿಯ ಮತ ಕೇಂದ್ರದಲ್ಲಿಯೇ ಮತ ಚಲಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಈ ಸಂದರ್ಭ ಮುಖಂಡರಾದ ಶಿವಣ್ಣ, ರವಿ, ಮೋಹನ್ ಕೃಷ್ಣ, ಕನಕರಾಜ, ರಾಮಕೃಷ್ಣ, ಹರೀಶ್, ಲಕ್ಷ್ಮಣ್, ಬಸವಣ್ಣ, ಶಿವರಾಜ್, ನಾಗೇಗೌಡ, ಸಂತೋಷ್ ಕುಮಾರ್, ಪರಮೇಶ್, ರಾಮಯ್ಯ, ಮಂಜುನಾಥ್ ಸೇರಿದಂತೆ ಹರವೆ ಮಲ್ಲರಾಜಪಟ್ಟಣ ಗ್ರಾಮಸ್ಥರು ಇದ್ದರು.
