ಹೊಸದಿಲ್ಲಿ : ಅರುಣ್ ಗೋಯೆಲ್ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ತೆರವಾಗಿರುವ ಎರಡು ಚುನಾವಣಾ ಆಯುಕ್ತರ ಹುದ್ದೆಗಳನ್ನು ಈ ವಾರಾಂತ್ಯದಲ್ಲಿ ಭರ್ತಿ ಮಾಡಲು ಮೋದಿ ಸರ್ಕಾರ ಮುಂದಾಗಿದ್ದು, ಇದರ ವಿರುದ್ದ ಕಾಂಗ್ರೆಸ್ ನಾಯಕಿ ಜಯ ಠಾಕೂರ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಪಟ್ಟಂತೆ ೨೦೨೩ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಜಾರಿಗೆ ತರಲಾಗಿರುವ ಕಾಯ್ದೆಯನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ಜಯ ಠಾಕೂರ್, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಪಟ್ಟಂತೆ ಕಾಯ್ದೆ ಜಾರಿಗೊಳಿಸುವ ಮೊದಲು, ಅಂದರೆ ೨೦೨೩ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಲ್ಲಿ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಲ್ಲಿ ಸಿಜೆಐ ಇರಬೇಕು ಎಂದು ಹೇಳಿತ್ತು. ಅದೇ ನಿಯಮವನ್ನು ಮತ್ತೆ ಜಾರಿಗೆ ತಂದು ಚುನಾವಣಾ ಆಯಕ್ತರ ನೇಮಕದಲ್ಲಿ ಪಾರದರ್ಶಕತೆ ಕಾಪಾಡುವಂತೆ ಜಯ ಠಾಕೂರ್ ಆಗ್ರಹಿಸಿದ್ದಾರೆ.