ಬಳ್ಳಾರಿ: ತತ್ವಪದಕಾರರು ಎಲ್ಲ ಜಾತಿಯ ಮರಗಳ ಕಾಡಿನಂತೆ ಬಾಳಿ ಬೆಳಕಾದವರು. ಸಮಾಜದಲ್ಲಿ ನಿತ್ಯ ಎದುರಿಸುತ್ತಿರುವ ಮೇಲು-ಕೀಳು, ದ್ವೇಷ, ಅಸೂಯೆ, ಅಹಂಕಾರ ಮುಂತಾದ ಬಿಕ್ಕಟ್ಟುಗಳನ್ನು ಅವರು ಸಾಹಿತ್ಯದ ಮೂಲಕ ಹಸನುಗೊಳಿಸುತ್ತ ಸಹಬಾಳ್ವೆಯನ್ನು ಬಿತ್ತಿದವರು ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಕನ್ನಡ ವಿಭಾಗದಿಂದ ಬುಧವಾರ ಏರ್ಪಡಿಸಿದ್ದ “ತತ್ವಪದ ಸಾಹಿತ್ಯ: ಸಹಬಾಳ್ವೆಯ ನೆಲೆಗಳು” ಎನ್ನುವ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಆಧುನಿಕ ಬದುಕಿನ ಬದಲಾದ ಕಾಲಘಟ್ಟದಲ್ಲಿ ನಾವೆಲ್ಲರೂ ಭಾವನೆಗಳ ಕಳೆದುಕೊಂಡು ಬದುಕುತ್ತಿದ್ದೇವೆ. ನಮ್ಮ ಮಾತು, ಆಲೋಚನಾ ಕ್ರಮದಲ್ಲಿ ವೈರುಧ್ಯಗಳಿವೆ. ಭಯ, ಹಿಂಸೆ ಎಲ್ಲೆಡೆ ವಿಜೃಂಭಿಸುತಿದೆ. ಈ ಬಗೆಯ ತಲ್ಲಣದ ಪ್ರಕ್ಷುಬ್ಧ ಸನ್ನಿವೇಶದಲ್ಲಿ ಏಕತೆಯನ್ನು ಮೀರಿ ಬಹುತ್ವದ ಕಡೆ ಸಾಗಬೇಕಿದೆ ಎಂದು ಒತ್ತಿ ಹೇಳಿದರು. ತತ್ವಪದಕಾರರು ತಮ್ಮ ಸಾಹಿತ್ಯದ ಮೂಲಕ ಮನದ ಮೈಲಿಗೆಯನ್ನು ಕಳೆದವರು. ಗುರುವನ್ನೇ ಗಂಡ ಎಂದು ಪರಿಭಾವಿಸಿದರು. ಪ್ರಧಾನವಾಗಿ ಅವರು ಸಾಮರಸ್ಯದ, ಸಹಬಾಳ್ವೆಯ ಹಾಡುಗಳನ್ನು ಹಾಡಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಿದರು ಎಂದು ಮಾರ್ಮಿಕವಾಗಿ ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಕೆ.ಮಂಜುನಾಥ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ತತ್ವಪದ ಸಾಹಿತ್ಯದಲ್ಲಿ ಇರುವ ಮಾನವೀಯ ಮೌಲ್ಯ, ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ, ಗಾಯತ್ರಿ ಭಾವಿಕಟ್ಟಿ, ಡಾ.ಸೋಮಶೇಖರ್, ಹಿರೇಹಾಳ್ ಇಬ್ರಾಹಿಂ ಸಾಬ್ ಫೌಂಡೇಶನ್ ಅಧ್ಯಕ್ಷ ದಾದಾ ಕಲಂದರ್, ಸಹಾಯಕ ಪ್ರಾಧ್ಯಾಪಕರಾದ ಪ್ರವೀಣ್ ಕುಮಾರ್ ಎಂ.ಎನ್, ಗೋವಿಂದಪ್ಪ, ಸತ್ಯಮೂರ್ತಿ, ಚಂದ್ರಶೇಖರ, ರಾಮಸ್ವಾಮಿ, ಲಿಂಗಪ್ಪ, ರಾಜಪ್ಪ, ಪ್ರಭಾವ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.