ಗುಂಡ್ಲುಪೇಟೆ: ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಿದರೆ ಅವರ ಭೌತಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ದ್ರಾಕ್ಷಾಯಿಣಮ್ಮ ತಿಳಿಸಿದರು.
ತಾಲೂಕಿನ ಬೊಮ್ಮಲಾಪುರ ಗ್ರಾಮದ ಗೌತಮ ಪ್ರೌಢಶಾಲೆಯಲ್ಲಿ ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಬ್ಲಾಕ್ ಸೊಸೈಟಿ ಹಾಗೂ ಗೌತಮ ಪ್ರೌಢಶಾಲೆ ಸಹಯೋಗದಲ್ಲಿ ನಡೆದ ಬಾಲ್ಯ ವಿವಾಹ ಬಾಲ ಕಾರ್ಮಿಕ ಪದ್ದತಿ, ಪೋಕ್ಸೋ ಕಾಯ್ದೆ ಹಾಗೂ ಹದಿಹರೆಯದ ಮಕ್ಕಳ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯದ ಕುರಿತು ಏರ್ಪಡಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹದಿ ಹರೆಯದ ವಯಸ್ಸಿನಲ್ಲಿ ಬಾಲ್ಯ ವಿವಾಹ ಮಾಡುವುದು ಹೆಣ್ಣು ಮಕ್ಕಳನ್ನು ಅಪಾಯಕ್ಕೆ ತಳ್ಳಿದಂತೆ. ಇದು ಶಿಕ್ಷಾರ್ಹ ಅಪರಾಧವಾಗಿದೆ. ಆದ್ದರಿಂದ ಯಾವೊಬ್ಬ ಪೋಷಕರು ಸಹ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ರೂಪುಗಳ್ಳುವಂತೆ ಮಾಡಬೇಕು ಎಂದು ಸಲಹೆ ನೀಡಿದರು.
ಮಹಿಳಾ ಸಾಂತ್ವನ ಘಟಕದ ಮಹೇಶ್ ಮಾತನಾಡಿ, ಬಾಲ್ಯ ವಿವಾಹದ ಕುರಿತು ಕಠಿಣ ಕಾನೂನಿದ್ದು, ಇದನ್ನು ಮಾಡುವವರು, ಸಹಕಾರ ನೀಡುವವರು ಎಲ್ಲರಿಗೂ ಜೈಲು ಶಿಕ್ಷೆ ವಿಧಿಸುವ ಅವಕಾಶಗಳಿವೆ. ಆದ್ದರಿಂದ ಯಾರು ಸಹ ಬಾಲ್ಯ ವಿವಾಹಕ್ಕೆ ಪ್ರೇರಣೆ ನೀಡಬಾರದು ಎಂದು ಎಚ್ಚರಿಕೆ ನೀಡಿದರು.
ಸಾಹಿತಿ ಕಾಳಿಂಗಸ್ವಾಮಿ ಸಿದ್ಧಾರ್ಥ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಸ್ಥಿಮಿತ ಕಳೆದುಕೊಳ್ಳಬಾರದು. ಕಲಿಕೆ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿದರೆ ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದಿ ಶಾಲೆ ಹಾಗೂ ಪೋಷಕರಿಗೂ ಹೆಸರು ತರಬಹುದು. ಶಾಲಾ-ಕಾಲೇಜಿನ ಹಂತದಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾದರೆ ಜೀವನ ಹಾಳು ಮಾಡಿಕೊಳ್ಳಬೇಕಾಗುತ್ತದೆ. ಆದ್ದರಿಂದ ಬೀಡಿ, ಸಿಗರೇಟ್, ಗುಟ್ಕಾದಂತಹ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವರಾಜು, ಶಾಲೆಯ ಮುಖ್ಯ ಶಿಕ್ಷಕ ಕೆ.ರಾಜು, ರಘು, ವೀರಭದ್ರಸ್ವಾಮಿ, ಸ್ತ್ರೀ ಶಕ್ತಿ ಮಹಿಳಾ ಒಕ್ಕೂಟ ಸಂಯೋಜಕರಾದ ಎಂ.ಗುರುಮಲ್ಲಮ್ಮ, ನಿರ್ದೇಶಕರಾದ ಸಾವಿತ್ರಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು.