ಮೈಸೂರು : ಮನುಷ್ಯ ಚೆನ್ನಾಗಿರಬೇಕಾದರೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಎರಡು ಮುಖ್ಯವಾಗಿದ್ದು ಈ ಎರಡನ್ನು ಸಮತೋಲನವಾಗಿ ಸರಿದೂಗಿಸಿಕೊಂಡು ಮನುಷ್ಯ ಬದುಕಬೇಕಾಗಿದೆ ಎಂದು ಸುತ್ತೂರು ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಜಿ ತಿಳಿಸಿದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಮೈಸೂರು ವತಿಯಿಂದ ದಸರಾಹಬ್ಬದ ಅಂಗವಾಗಿ ಸಿದ್ಧಾರ್ಥನಗರದಲ್ಲಿರುವ ಕನಕಭವನದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಕನಕ ಗುರುಪೀಠ ಪ್ರತಿವರ್ಷ ದಸರಾ ಸಂದರ್ಭದಲ್ಲಿ ಕೆ.ಆರ್.ನಗರದಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಈ ಬಾರಿ ಇಲ್ಲಿಯೂ ಸಹ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿರುವುದು ಈ ಭಾಗದ ಜನರಿಗೆ ಅನುಕೂಲವಾಗಿದೆ. ಶ್ರೀಮಠದ ಸೇವೆ ಹೀಗೆ ಮುಂದುವರೆಯಲಿ ಎಂದರು.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿ ಮಾತನಾಡಿ, ಸುತ್ತೂರು ಶ್ರೀಗಳು ಆರೋಗ್ಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸೇವೆ ಅನನ್ಯವಾಗಿದ್ದು, ಆಯುರ್ವೇದ, ಪ್ರಕೃತಿ ಚಿಕಿತ್ಸೆಗಳನ್ನು ಜನಸಾಮಾನ್ಯರಿಗೆ ಒದಗಿಸಿ, ಅನುಕೂಲಮಾಡಿಕೊಟ್ಟಿದ್ದಾರೆ. ನಾನು ಸಹ ಪ್ರಕೃತಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಾಖಾಮಠದ ಶ್ರೀಗಳಾದ ಶ್ರೀ ಸೋಮನಾಥಸ್ವಾಮೀಜಿ ವಿಧಾನಪರಿಷತ್ ಸದಸ್ಯರಾದ ಅಡಗೂರು ಹೆಚ್. ವಿಶ್ವನಾಥ್, ಸಿ.ಹೆಚ್. ವಿಜಯಶಂಕರ್, ಎಂ.ಕೆ. ಸೋಮಶೇಖರ್, ಮಾಜಿ ಮೇಯರ್ ಬೈರಪ್ಪ, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪುಟ್ಟಬಸವೇಗೌಡ, ಡಾ. ನರೇಂದ್ರ, ಡಾ. ಮಾಲೇಗೌಡ, ತಾಲ್ಲೂಕು ಕುರಬರ ಸಂಘದ ಅಧ್ಯಕ್ಷ ಬಸವರಾಜು, ಕಾರ್ಯಧ್ಯಕ್ಷ ನಾಡನಹಳ್ಳಿ ರವಿ, ಹಿನಕಲ್ ರಾಜು, ಶಿವರುದ್ರಪ್ಪ, ಕಮಲ, ವಿಶ್ವ, ಮಂಜುನಾಥ್, ಪಾಪಣ್ಣ, ಶಿವಣ್ಣ, ಮಾದೇಗೌಡ ಮತ್ತಿತರರು ಹಾಜರಿದ್ದರು