Thursday, April 17, 2025
Google search engine

Homeಅಪರಾಧಕಾನೂನುಪಿಲಿಕುಳ: ಕಂಬಳ ಉತ್ಸವ ಆಯೋಜನೆ ಅಧ್ಯಯನಕ್ಕಾಗಿ ತಾಂತ್ರಿಕ ಸಮಿತಿ ರಚನೆ

ಪಿಲಿಕುಳ: ಕಂಬಳ ಉತ್ಸವ ಆಯೋಜನೆ ಅಧ್ಯಯನಕ್ಕಾಗಿ ತಾಂತ್ರಿಕ ಸಮಿತಿ ರಚನೆ

ಬೆಂಗಳೂರು: ಮಂಗಳೂರಿನ ಪಿಲಿಕುಳದಲ್ಲಿ ಕಂಬಳ ಉತ್ಸವ ಆಯೋಜನೆಯಿಂದ ಪಿಲಿಕುಳ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ತೊಂದರೆ ಆಗಲಿದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಲು ದ.ಕ. ಜಿಲ್ಲಾಧಿಕಾರಿಯವರು ನಾಲ್ವರು ಸದಸ್ಯರ ತಾಂತ್ರಿಕ ಸಮಿತಿಯೊಂದನ್ನು ರಚಿಸಿದ್ದಾರೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಪಿಲಿಕುಳ ಜೈವಿಕ ಉದ್ಯಾನವನ (ನಿಸರ್ಗಧಾಮ)ದ ಬಳಿ ಕಂಬಳ ಆಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ “ಪೀಪಲ್‌ ಫಾರ್‌ ದಿ ಎಥಿಕಲ್‌ ಟ್ರೀಟ್‌ಮೆಂಟ್‌ ಆಫ್ ಎನಿಮಲ್‌’ (ಪೆಟಾ) ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಹಾಗೂ ನ್ಯಾ| ಕೆ.ವಿ. ಅರವಿಂದ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ರಾಜ್ಯ ಸರಕಾರದ ಪರವಾಗಿ ವಾದ ಮಂಡಿಸಿದ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ, ಪಿಲಿಕುಳದಲ್ಲಿ ಕಂಬಳ ಆಯೋಜನೆಯಿಂದ ಅಲ್ಲಿನ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯದ ಉಪ ನಿರ್ದೇಶಕಿ ಸಿ.ವಿ. ದೀಪ, ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಂಗಳೂರು ಉಪ ನಿರ್ದೇಶಕ ಡಾ| ಅರುಣಕುಮಾರ್‌ ಶೆಟ್ಟಿ, ಎನ್‌ಐಟಿಕೆ ಸುರತ್ಕಲ್‌ನ ಪ್ರಾಧ್ಯಾಪಕ ಪ್ರೊ| ಶ್ರೀನಿಕೇತನ್‌, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೈಕಂಪಾಡಿ, ಮಂಗಳೂರು ಇಲ್ಲಿನ ಪರಿಸರ ಅಧಿಕಾರಿ ಲಕ್ಷ್ಮೀಕಾಂತ್‌ ಅವರನ್ನೊಳಗೊಂಡ ಸಮಿತಿಯನ್ನು ರಚಿಸಿ ದ.ಕ. ಜಿಲ್ಲಾಧಿಕಾರಿ ನ.15ರಂದು ಆದೇಶ ಹೊರಡಿಸಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅಲ್ಲದೇ ಆದೇಶದ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಸಮಿತಿಯು ಪಿಲಿಕುಳ ಕಂಬಳ ಉತ್ಸವ ನಡೆಸುವ ಸ್ಥಳ ಮತ್ತು ಪಿಲಿಕುಳ ಜೈವಿಕ ಉದ್ಯಾನವನವನ್ನು ಪರಿಶೀಲನೆ ನಡೆಸಿ, ಪಿಲಿಕುಳದಲ್ಲಿ ಕಂಬಳ ಉತ್ಸವ ನಡೆಸುವುದರಿಂದ ಅಲ್ಲಿನ ಜೈವಿಕ ಉದ್ಯಾನವನದ ಪ್ರಾಣಿಗಳಿಗೆ ಏನಾದರೂ ತೊಂದರೆ ಆಗಲಿದೆಯೇ ಎಂಬ ಬಗ್ಗೆ ತಾಂತ್ರಿಕವಾಗಿ ಅಧ್ಯಯನ ನಡೆಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ಎರಡು ವಾರದೊಳಗೆ ವರದಿ ಸಲ್ಲಿಸಲಿದೆ. ಆ ವರದಿಯನ್ನು ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಎಂದು ಅಡ್ವೋಕೇಟ್‌ ಜನರಲ್‌ ವಿವರಿಸಿದರು.

ಅಡ್ವೋಕೇಟ್‌ ಜನರಲ್‌ ಅವರ ಮನವಿ ಪರಿಗಣಿಸಿದ ನ್ಯಾಯಪೀಠ, ವಿಚಾರಣೆಯನ್ನು ಡಿ. 4ಕ್ಕೆ ಮುಂದೂಡಿತು. ಇದೇ ವೇಳೆ ಅರ್ಜಿಯಲ್ಲಿ ಹೊಸದಾಗಿ ಪ್ರತಿವಾದಿಗಳನ್ನಾಗಿ ಸೇರಿಸಲಾದ ದ.ಕ. ಜಿಲ್ಲಾಧಿಕಾರಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತಿತರರಿಗೆ ನೋಟಿಸ್‌ ಜಾರಿಗೊಳಿಸಲು ನ್ಯಾಯಪೀಠ ಆದೇಶಿಸಿತು.

RELATED ARTICLES
- Advertisment -
Google search engine

Most Popular