ಪಿರಿಯಾಪಟ್ಟಣ: ತಾಲೂಕಿನ ಗಡಿಭಾಗ ಕೊಪ್ಪ ಗ್ರಾಮದ ಕಾವೇರಿ ನದಿ ತೀರದಲ್ಲಿರುವ ಕಾವೇರಮ್ಮ ಪ್ರತಿಮೆ ಆವರಣದಲ್ಲಿ ಅ.18 ರ ಬುಧವಾರ ಬಾರವಿ ಕಾವೇರಿ ಕನ್ನಡ ಸಂಘ ವತಿಯಿಂದ 11ನೇ ವರ್ಷದ ಕಾವೇರಿ ಸಂಕ್ರಮಣದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಬಾರವಿ ಕಾವೇರಿ ಕನ್ನಡ ಸಂಘದ ಅಧ್ಯಕ್ಷರಾದ ಬಬಿಂದ್ರ ಪ್ರಸಾದ್ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ ಕಾವೇರಮ್ಮ ಅನ್ನಸಂತರ್ಪಣ ಭವನ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ, ಪಶು ಸಂಗೋಪನೆ ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಮಡಿಕೇರಿ ಶಾಸಕರಾದ ಮಂತರ್ ಗೌಡ, ಮಾಜಿ ಸಚಿವರಾದ ಸಿ.ಎಚ್ ವಿಜಯ್ ಶಂಕರ್, ಎಸ್ಎಲ್ಎನ್ ಕಾಫಿ ಕ್ಯೂರಿಂಗ್ ವರ್ಕ್ಸ್ ಮಾಲೀಕರಾದ ಸಾತಪ್ಪನ್, ವಿಶ್ವನಾಥನ್, ಕೈಲಾಶ್ ಕಮೊಡಿಟಿಸ್ ಮಾಲೀಕರಾದ ಬಿ.ಕೆ ಸುದೀಪ್ ಕುಮಾರ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಮುಖಂಡರು ಭಾಗವಹಿಸಲಿದ್ದಾರೆ.

ಶ್ರೀ ಕಾವೇರಮ್ಮ ಮೂರ್ತಿಗೆ ವಿವಿಧ ಅಭಿಷೇಕ ಪುಷ್ಪಾಲಂಕಾರ ಬಳಿಕ ಮಹಾ ಮಂಗಳಾರತಿ ನಡೆಸಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮತ್ತು ತೀರ್ಥ ಪ್ರಸಾದ ವಿತರಿಸಲಾಗುವುದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್ ಹಾಗು ವಿಜಯೇಂದ್ರ ಪ್ರಸಾದ್ ಕೋರಿದ್ದಾರೆ.