ಪಿರಿಯಾಪಟ್ಟಣ: ಪಟ್ಟಣದ ತಾಲೂಕು ಆಡಳಿತ ಭವನ ಕಚೇರಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾದ ಶ್ರೀ ಜಗಜ್ಯೋತಿ ಬಸವಣ್ಣ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಯಿತು.
ಈ ವೇಳೆ ಶಿರಸ್ತೆದಾರ್ ಗಳಾದ ಶಕೀಲಾ ಬಾನು ಹಾಗೂ ವಿನೋದ್ ಕುಮಾರ್ ಅವರು ಮಾತನಾಡಿ ಬಸವಣ್ಣನವರು ಪ್ರತಿಪಾದಿಸಿದ ಜಾತಿ ರಹಿತ ಸಮಾಜ ನಿರ್ಮಾಣ ಮತ್ತು ಕಾಯಕದ ಮಹತ್ವ ಹಾಗೂ ವರ್ಗ ರಹಿತ ಸಮಾಜ ಜೀವನ ಮಾರ್ಗ ಸರ್ವಕಾಲಕ್ಕೂ ದಾರಿದೀಪವಾಗಿದೆ, ಸಮಾಜದಲ್ಲಿ ಅಸಮಾನತೆ ಮತ್ತು ಮೂಢನಂಬಿಕೆಗಳನ್ನು ಹೋಗಲಾಡಿಸಲು ಕ್ರಾಂತಿಕಾರಿ ವಚನಗಳ ಮೂಲಕ ಶ್ರಮಿಸಿದ್ದರು, ನಮ್ಮ ದೇಶದ ಸಂವಿಧಾನದ ಆಶಯಗಳಿಗೆ ಬಸವಣ್ಣನವರ ಚಿಂತನೆಗಳು ಸಾಂಸ್ಕೃತಿಕ ರಾಯಭಾರಿತ್ವಕ್ಕೆ ಸಮರ್ಥನೀಯವಾದ ನೆಲೆ ಒದಗಿಸಿರುವ ಮೇರೆಗೆ ಸರ್ಕಾರದ ಆದೇಶದಂತೆ ಶ್ರೀ ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವ ಹಿನ್ನೆಲೆ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬ ಅಡಿ ಬರಹವಿರುವ ಭಾವಚಿತ್ರ ಅನಾವರಣ ಮಾಡಲಾಗಿದೆ ಎಂದರು.
ಈ ಸಂದರ್ಭ ಭೂ ಮಾಪನ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಮುನಿಯಪ್ಪ ಮತ್ತು ಸಿಬ್ಬಂದಿ, ಉಪ ತಹಶೀಲ್ದಾರ್ ಶುಭ, ಸಿಬ್ಬಂದಿ ಜಯಕುಮಾರ್, ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಹಾಗೂ ತಾಲೂಕು ಆಡಳಿತ ಕಚೇರಿ ಸಿಬ್ಬಂದಿ ಇದ್ದರು.