Wednesday, June 10, 2026
Google search engine

Homeದೇಶಪ್ರಧಾನಿ ಮೋದಿ ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ : ಜಿ-7 ಶೃಂಗಸಭೆಯಲ್ಲಿ ಭಾಗಿ

ಪ್ರಧಾನಿ ಮೋದಿ ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ : ಜಿ-7 ಶೃಂಗಸಭೆಯಲ್ಲಿ ಭಾಗಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಜೂನ್ 13 ರಿಂದ 19 ರವರೆಗೆ ಫ್ರಾನ್ಸ್, ಸ್ಲೋವಾಕಿಯಾ ಪ್ರವಾಸ ಕೈಗೊಳ್ಳಲಿದ್ದು, ಜಿ-7 ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ. ಈ ಏಳು ದಿನಗಳ ಯುರೋಪ್ ಪ್ರವಾಸದಲ್ಲಿ ಪ್ರಧಾನಿಯವರು ಜೂನ್ 13 ರಿಂದ 14 ರವರೆಗೆ ಫ್ರಾನ್ಸ್ (ನೈಸ್), ಜೂನ್ 14 ರಿಂದ 16 ರವರೆಗೆ ಸ್ಲೋವಾಕಿಯಾ ಮತ್ತು ಜೂನ್ 16 ರಿಂದ 19 ರವರೆಗೆ ಸ್ಲೋವಾಕಿಯಾ (ಇವಿಯಾನ್ ಮತ್ತು ಪ್ಯಾರಿಸ್) ಗೆ ಭೇಟಿ ನೀಡಲಿದ್ದಾರೆ.

ಈ ಪ್ರವಾಸದ ಮುಖ್ಯ ಉದ್ದೇಶ ಈ ದೇಶಗಳೊಂದಿಗೆ ಭಾರತದ ಸಹಕಾರವನ್ನು ಮತ್ತಷ್ಟು ಬಲಪಡಿಸುವುದು, ಹೊಸ ಪಾಲುದಾರಿಕೆಗಳನ್ನು ಉತ್ತೇಜಿಸುವುದು ಮತ್ತು ತಂತ್ರಜ್ಞಾನ, ಹೂಡಿಕೆ ಹಾಗೂ ಜಾಗತಿಕ ವಿಷಯಗಳ ಕುರಿತು ಚರ್ಚಿಸುವುದಾಗಿದೆ.

ಫ್ರಾನ್ಸ್ ಪ್ರವಾಸ ಮತ್ತು ‘ಭಾರತ್ ಇನ್ನೋವೇಟ್ಸ್’

ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಜೂನ್ 14 ರಂದು ನೈಸ್‌ನಲ್ಲಿ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಉಭಯ ನಾಯಕರು ಭಾರತ ಮತ್ತು ಫ್ರಾನ್ಸ್ ನಡುವಿನ ಸಮಗ್ರ ಸಂಬಂಧಗಳನ್ನು ಪರಾಮರ್ಶಿಸಲಿದ್ದಾರೆ. ಈ ವರ್ಷ ಉಭಯ ದೇಶಗಳ ಬಾಂಧವ್ಯವನ್ನು ‘ವಿಶೇಷ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ’ (Special Global Strategic Partnership) ಮಟ್ಟಕ್ಕೆ ಹೆಚ್ಚಿಸಲಾಗಿದೆ.

ನೈಸ್‌ನಲ್ಲಿ ಉಭಯ ನಾಯಕರು ಜಂಟಿಯಾಗಿ ‘ಭಾರತ್ ಇನ್ನೋವೇಟ್ಸ್’ (Bharat Innovates) ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತ, ಫ್ರಾನ್ಸ್ ಮತ್ತು ಇತರ ದೇಶಗಳ ಪ್ರಮುಖ ಸ್ಟಾರ್ಟ್‌ಅಪ್‌ಗಳು ಹಾಗೂ ವೆಂಚರ್ ಕ್ಯಾಪಿಟಲ್ ಫಂಡ್‌ಗಳು ಭಾಗವಹಿಸಲಿವೆ. ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷದ (Innovation Year) ಅಂಗವಾಗಿ ನಡೆಯುತ್ತಿರುವ ಈ ವಿಶೇಷ ಕಾರ್ಯಕ್ರಮವು ಉಭಯ ದೇಶಗಳ ನಡುವಿನ ನಾವೀನ್ಯತೆ ಪಾಲುದಾರಿಕೆಯನ್ನು ಮತ್ತಷ್ಟು ಮುನ್ನಡೆಸಲಿದೆ.

ಸ್ಲೋವಾಕಿಯಾಗೆ ಚಾರಿತ್ರಿಕ ಭೇಟಿ

ಪ್ರವಾಸದ ಎರಡನೇ ಹಂತದಲ್ಲಿ, ಸ್ಲೋವಾಕ್ ಗಣರಾಜ್ಯದ ಪ್ರಧಾನಿ ರಾಬರ್ಟ್ ಫಿಕೊ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 14 ರಿಂದ 16 ರವರೆಗೆ ಸ್ಲೋವಾಕಿಯಾಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. 1993 ರಲ್ಲಿ ಸ್ಲೋವಾಕಿಯಾ ಸ್ವಾತಂತ್ರ್ಯ ಪಡೆದ ನಂತರ ಭಾರತದ ಪ್ರಧಾನಿಯೊಬ್ಬರು ಆ ದೇಶಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ.

ಫೆಬ್ರವರಿ 2026 ರಲ್ಲಿ ‘ಎಐ ಇಂಪ್ಯಾಕ್ಟ್ ಶೃಂಗಸಭೆ’ಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಸ್ಲೋವಾಕ್ ಅಧ್ಯಕ್ಷ ಪೀಟರ್ ಪೆಲ್ಲೆಗ್ರಿನಿ ಮತ್ತು ಏಪ್ರಿಲ್ 2025 ರಲ್ಲಿ ಸ್ಲೋವಾಕಿಯಾಕ್ಕೆ ಭೇಟಿ ನೀಡಿದ್ದ ಭಾರತದ ರಾಷ್ಟ್ರಪತಿಯವರ ಪ್ರವಾಸದ ಮುಂದುವರಿದ ಭಾಗವಾಗಿ ಈ ಭೇಟಿ ನಡೆಯುತ್ತಿದೆ. ಈ ಅವಧಿಯಲ್ಲಿ ಪ್ರಧಾನಿಯವರು ಪ್ರಧಾನಿ ಫಿಕೊ ಅವರೊಂದಿಗೆ ಮಾತುಕತೆ ನಡೆಸಿ, ಹೊಸ ಸಹಕಾರದ ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ. ಹಾಗೆಯೇ ಅಧ್ಯಕ್ಷ ಪೆಲ್ಲೆಗ್ರಿನಿ ಅವರನ್ನೂ ಭೇಟಿಯಾಗಲಿದ್ದಾರೆ. ಈ ಭೇಟಿಯು ಭಾರತ ಮತ್ತು ಸ್ಲೋವಾಕಿಯಾ ನಡುವೆ ವ್ಯಾಪಾರ, ಹೂಡಿಕೆ, ಆಟೋಮೊಬೈಲ್ ಮತ್ತು ರೈಲ್ವೆ ನಿರ್ಮಾಣದಂತಹ ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಜಿ-7 ಶೃಂಗಸಭೆ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳು

ಪ್ರವಾಸದ ಮೂರನೇ ಹಂತದಲ್ಲಿ, ಪ್ರಧಾನಮಂತ್ರಿಯವರು ಜೂನ್ 16 ಮತ್ತು 17, 2026 ರಂದು ಫ್ರಾನ್ಸ್‌ನ ಇವಿಯಾನ್‌ನಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಅವರು ಜಿ-7 ದೇಶಗಳ ನಾಯಕರು, ಆಹ್ವಾನಿತ ಪಾಲುದಾರ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಜಾಗತಿಕ ವಿಷಯಗಳ ಕುರಿತು ವಿಚಾರ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಈ ಕೆಳಗಿನ ಪ್ರಮುಖ ವಿಷಯಗಳ ಆಧಾರಿತ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ‘ಹೊಸ ಪಾಲುದಾರಿಕೆಗಳನ್ನು ಬಲಪಡಿಸುವುದು ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟನ್ನು ಪುನಶ್ಚೇತನಗೊಳಿಸುವುದು’, ‘ಕೃತಕ ಬುದ್ಧಿಮತ್ತೆಯನ್ನು (AI) ಸುರಕ್ಷಿತ, ವೇಗ ಹಾಗೂ ಪರಿಣಾಮಕಾರಿ ರೀತಿಯಲ್ಲಿ ಜಾರಿಗೆ ತರುವುದನ್ನು ಖಚಿತಪಡಿಸುವುದು’ಇದರ ಹೊರತಾಗಿ, ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿಯವರು ಹಲವು ದೇಶಗಳ ನಾಯಕರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳನ್ನೂ ನಡೆಸಲಿದ್ದಾರೆ.

ಪ್ರವಾಸದ ಅಂತಿಮ ಹಂತದಲ್ಲಿ, ಪ್ರಧಾನಮಂತ್ರಿಯವರು ಜೂ. 18, 2026 ರಂದು ಪ್ಯಾರಿಸ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಕೆಲವು ದ್ವಿಪಕ್ಷೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಯುರೋಪ್‌ನ ಅತಿದೊಡ್ಡ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್ ಈವೆಂಟ್ ಆದ ‘ವಿವಾಟೆಕ್ ಶೃಂಗಸಭೆ’ಯಲ್ಲಿ (VivaTech Summit) ಭಾಗಿಯಾಗಲಿದ್ದಾರೆ.

ಪ್ರಧಾನಮಂತ್ರಿಯವರ ಈ ಮುಂಬರುವ ಯುರೋಪ್ ಪ್ರವಾಸವು ಭಾರತದೊಂದಿಗೆ ಫ್ರಾನ್ಸ್, ಸ್ಲೋವಾಕಿಯಾ ಮತ್ತು ಜಿ-7 ದೇಶಗಳ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಜಿ-7 ನಲ್ಲಿ ಅವರ ಭಾಗವಹಿಸುವಿಕೆಯು ಭಾರತವು ಇಂದು ‘ಗ್ಲೋಬಲ್ ಸೌತ್’ನ ಪ್ರಬಲ ಧ್ವನಿಯಾಗಿದೆ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾಲುದಾರನಾಗಿದೆ ಎಂಬುದನ್ನು ತೋರಿಸುತ್ತದೆ. ‘ಭಾರತ್ ಇನ್ನೋವೇಟ್ಸ್’ ಮತ್ತು ‘ವಿವಾಟೆಕ್ ಶೃಂಗಸಭೆ’ಯಲ್ಲಿ ಅವರ ಉಪಸ್ಥಿತಿಯು ಭಾರತವನ್ನು ನಾವೀನ್ಯತೆ, ಡಿಜಿಟಲ್ ರೂಪಾಂತರ ಮತ್ತು ಉದ್ಯಮಶೀಲತೆಯ ಜಾಗತಿಕ ಕೇಂದ್ರವಾಗಿ ಬಿಂಬಿಸಲಿದೆ.

RELATED ARTICLES
- Advertisment -
Google search engine

Most Popular