ಮುಂಬೈ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿ ಮಾರ್ಗವನ್ನು ಅನುಸರಿಸುತ್ತಿದ್ದು, ತಮ್ಮ ವಿರುದ್ಧ ಇರುವವರನ್ನೆಲ್ಲ ಜೈಲಿಗೆ ಹಾಕುತ್ತಿದ್ದಾರೆ ಎಂದು ಟೀಕಿಸಿರುವ ಎನ್‌ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್, ಪ್ರಧಾನಿ ತಮ್ಮದೇ ಆದ ವೈಯಕ್ತಿಕ ಸಿದ್ಧಾಂತವನ್ನು ಅನುಸರಿಸುತ್ತಿದ್ದು, ಅದು ದೇಶದ ಹಿತಾಸಕ್ತಿಯಿಂದ ಕೂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ನರೇಂದ್ರ ಮೋದಿ ಬಾರಾಮತಿಗೆ ಆಗಮಿಸಿದ್ದಾಗ, ನನ್ನ ಕೈ ಹಿಡಿದುಕೊಂಡು ರಾಜಕೀಯ ಪ್ರಾರಂಭಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಅವರ ರಾಜಕೀಯಕ್ಕೂ, ನನ್ನ ಸಿದ್ಧಾಂತಕ್ಕೂ ಯಾವುದೇ ಸಂಬಂಧವಿಲ್ಲ. ಅವರು ನನ್ನ ಕೈ ಹಿಡಿದುಕೊಂಡಿದ್ದಿದ್ದರೆ, ಅವರು ಈ ರೀತಿ ಕೆಲಸ ಮಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಇಂದು ಭಾನುವಾರ ಮಧ್ಯಾಹ್ನ ತಮ್ಮ ಪುತ್ರಿ ಹಾಗೂ ಮಹಾ ವಿಕಾಸ್ ಅಘಾಡಿಯ ಬಾರಾಮತಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುಪ್ರಿಯಾ ಸುಳೆ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಹೇಳಿದರು.