ಬೆಳಗಾವಿ : ರಾಷ್ಟ್ರ ರಾಜಧಾನಿ ನವದೆಹಲಿಯ ಐತಿಹಾಸಿಕ ಕೆಂಪುಕೋಟೆ ಬಳಿ ಕಾರಿನಲ್ಲಿ ಬಾಂಬ್ ಸ್ಪೋಟಗೊಂಡು 13ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆ ಹಿನ್ನಲೆಯಲ್ಲಿ ಡಿ.8ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನಕ್ಕೆ ಹೈ ಅಲರ್ಟ್ ಘೋಷಿಸಲಾಗಿದೆ.
ಪ್ರತಿಭಟನೆ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯ ಲಾಭ ಪಡೆಯಬಹುದೆಂಬ ಕೇಂದ್ರ ಗುಪ್ತಚರ ವಿಭಾಗ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚನೆ ನೀಡಿದೆ. ಈ ಹಿಂದೆ ಪಂಜಾಬ್ ಮತ್ತು ಹರಿಯಾಣಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಪ್ರತಿಭಟನೆ ನೆಪದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹೊಂಚು ಹಾಕಿದ್ದರು.
ಇತ್ತೀಚೆಗೆ ದೆಹಲಿಯಲ್ಲಿ ವಾಯುಮಾಲಿನ್ಯದ ಗುಣಮಟ್ಟ ಕುಸಿದಿದೆ ಎಂಬ ಕಾರಣಕ್ಕಾಗಿ ಪ್ರತಿಭಟನಾನಿರತರ ಜೊತೆ ನಗರ ನಕ್ಸಲೀಯರು ಪೆಪ್ಪರ್ ಸ್ಪ್ರೇ ಮಾಡಿದ್ದರು.ಡಿ.8ರಿಂದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಲವು ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಈ ಸಂದರ್ಭದಲ್ಲಿ ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆಯಬಹುದೆಂದು ಖಚಿತ ಮಾಹಿತಿ ಆಧರಿಸಿ ಸರ್ಕಾರಕ್ಕೆ ಗುಪ್ತಚರ ವಿಭಾಗ ಮಾಹಿತಿ ಕೊಟ್ಟಿದೆ.
ಹೀಗಾಗಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.8ರಿಂದ 19ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ ಹಿಂದೆಂದೂ ಕಾಣದ ರೀತಿಯಲ್ಲಿ ಭದ್ರತೆ ಒದಗಿಸಲಾಗಿದೆ. ದೆಹಲಿಯ ಕೆಂಪುಕೋಟೆ ಬಳಿ ಕಾರ್‌ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆಯಿಂದ ಎಚ್ಚರಿಕೆಯ ಸಂದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳು ಹೈಅಲರ್ಟ್ ಆಗಿವೆ.ಅಧಿವೇಶನ ವೇಳೆಗೆ 6ರಿಂದ 8 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಧಿವೇಶನದಲ್ಲಿ ಸಚಿವಾಲಯ ಸಿಬ್ಬಂದಿ ಸೇರಿದಂತೆ 12 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ.
ಅಧಿವೇಶನ ಅವಧಿಯಲ್ಲಿ ಸುವರ್ಣ ಸೌಧ ಆವರಣದಲ್ಲಿ ಸಾಲು ಸಾಲು ಪ್ರತಿಭಟನೆಗಳು ನಡೆಯುತ್ತವೆ. ಹೀಗಾಗಿ ಪ್ರತಿದಿನ 50 ಸಾವಿರ ಜನ ಸೇರುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಯಾವುದೇ ಅಚಾತುರ್ಯ, ಅವಘಡ ಸಂಭವಿಸದಂತೆ ಪೊಲೀಸರು ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಸುವರ್ಣ ವಿಧಾನಸೌಧದ ಸುತ್ತಮುತ್ತ 3 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.
ಅಧಿವೇಶನಕ್ಕೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಖುದ್ದುDC ಮೊಹಮದ್ ರೋಷನ್, ಪೊಲೀಸ್ ಕಮೀಷನರ್ ಭೂಷಣ್ ಬೋರಸೆ, SP ಡಾ.ಭೀಮಾಶಂಕರ ಗುಳೇದ್ ಹಾಗೂ CEO ರಾಹುಲ್ ಶಿಂಧೆ ಅವರುಗಳು ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಸುವರ್ಣ ಸೌಧ ಆವರಣದಲ್ಲಿ ಉದ್ಯಾನವನ, ಧ್ವಜಸ್ತಂಭ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಕೂಡ ಇದೇ ವೇಳೆ ನಡೆಯಲಿದೆ. CM. DCM .ಸಚಿವರು, ಶಾಸಕರು ಹಾಗೂ ಸಿಬ್ಬಂದಿಗಳ ವಾಸ್ತವ್ಯಕ್ಕೆ ಈಗಾಗಲೇ 3 ಸಾವಿರ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮತ್ತೊಂದೆಡೆ ನಾಡದ್ರೋಹಿ MES ಸಂಸ್ಥೆ ನಡೆಸಲು ಯೋಜಿಸಿದ್ದ ಮಹಾಮೇಳಾವ್ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.



