Saturday, April 19, 2025
Google search engine

Homeರಾಜ್ಯಚಂದ್ರಶೇಖರನಾಥ ಸ್ವಾಮೀಜಿಗೆ ಕಾನೂನು ಪ್ರಕಾರವೇ ಪೊಲೀಸ್ ನೋಟಿಸ್ ನೀಡಲಾಗಿದೆ: ಸಚಿವ ದಿನೇಶ್ ಗುಂಡೂರಾವ್

ಚಂದ್ರಶೇಖರನಾಥ ಸ್ವಾಮೀಜಿಗೆ ಕಾನೂನು ಪ್ರಕಾರವೇ ಪೊಲೀಸ್ ನೋಟಿಸ್ ನೀಡಲಾಗಿದೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಮುಸ್ಲಿಮರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಚಂದ್ರಶೇಖರನಾಥ ಸ್ವಾಮೀಜಿಗೆ ಕಾನೂನು ಪ್ರಕಾರವೇ ಪೊಲೀಸ್ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಚಂದ್ರಶೇಖರನಾಥ ಸ್ವಾಮೀಜಿಗೆ ಕಾನೂನು ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಯಾರೇ ದೂರು ಕೊಟ್ಟರೂ ಎಫ್‌ಐಆರ್ ಹಾಕಲಾಗುತ್ತದೆ. ಇದರಲ್ಲಿ ಸರಕಾರ ಪಾತ್ರವಿಲ್ಲ, ಎಲ್ಲರಿಗೂ ಕಾನೂನು ಒಂದೇ ಎಂದರು. ಸ್ವಾಮೀಜಿ ಅವರ ಬಗ್ಗೆ ನನಗೂ ಗೊತ್ತಿದೆ. ಅವರ ಬಗ್ಗೆ ನಮಗೆ ಗೌರವವಿದೆ. ಒಮ್ಮೊಮ್ಮೆ ಅತಿರೇಕದ ಮಾತುಗಳು ಸಮಾಜದ ಸ್ವಾಸ್ಥ್ಯಕ್ಕೆ ಒಳ್ಳೆಯದಲ್ಲ. ಸದ್ಯ ಅವರು ಕ್ಷಮಾಪಣೆ ಕೇಳಿದ್ದಾರೆ. ಕಾನೂನು ಪ್ರಕಾರ ಮುಂದಿನ ಕ್ರಮ ಏನು ಎಂಬುದನ್ನು ಪೊಲೀಸರು ತೀರ್ಮಾನಿಸುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಸಚಿವರಿಂದ ಹೈಕಮಾಂಡ್ ವರದಿ ತರಿಸಿಕೊಂಡ ವಿಚಾರವಾಗಿ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಸಚಿವರುಗಳು ಏನೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ಹೈಕಮಾಂಡ್ ವರದಿ ಕೇಳಿದೆ. ಹೊಸ ಯೋಜನೆಗಳು ಏನು ಮಾಡಿದ್ದೀರಾ? ಯಾವ ರೀತಿ ಸಾಧನೆ ಮಾಡಿದ್ದೀರಿ ಎಂದು ವರದಿ ಹೈಕಮಾಂಡ್ ಕೇಳಿದ್ದು, ಅದನ್ನು ಕೊಡಲಾಗಿದೆ. ಇದು ಮೌಲ್ಯಮಾಪನ ಅನ್ನುವುದಕ್ಕಿಂತ ಸಚಿವರನ್ನು ಎಚ್ಚರಿಸುವ ಕೆಲಸ ಎನ್ನಬಹುದು ಎಂದರು.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆಯುತ್ತಿದೆ. ಅಧ್ಯಕ್ಷ ಸ್ಥಾನ ಒಳ್ಳೆಯ ಹುದ್ದೆ ಮತ್ತು ಒಳ್ಳೆಯ ಅವಕಾಶ. ಅಧ್ಯಕ್ಷ ಸ್ಥಾನದಿಂದ ಸಿಗುವ ಅನುಭವ ಬೇರೆಯದರಲ್ಲಿ ಸಿಗಲ್ಲ. ಕೆಪಿಸಿಸಿ ಅಧ್ಯಕ್ಷರಾಗುವುದಕ್ಕೆ ಆಸೆ ಇದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ಅದರ ಬಗ್ಗೆ ನಾವು ಚರ್ಚೆ ಮಾಡುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

RELATED ARTICLES
- Advertisment -
Google search engine

Most Popular