ನವದೆಹಲಿ: ಮಂಡ್ಯ ನಾಗಮಂಗಲದಲ್ಲಿ ನಡೆದ ಕೋಮು ಗಲಭೆ ವಿಚಾರವಾಗಿ ರಾಜಕಾರಣ ಮಾಡಬಾರದು ಎಂದು ಗೃಹ ಸಚಿವ ಜಿ ಪರಮೇಶ್ವರ ಹೇಳಿರುವುದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಅವರನ್ನು ಕೆರಳಿಸಿದೆ. ಈ ವಿಚಾರವಾಗಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಹೆಚ್ಡಿಕೆ ರಾಜಕಾರಣ ಮಾಡಬಾರದು ಎಂದು ಹೇಳುತ್ತಿದ್ದಾರೆ. ನಾನು ಯಾವತ್ತೂ ಸಮಾಜದ ಹೆಸರಲ್ಲಿ ರಾಜಕಾರಣ ಮಾಡಿಲ್ಲ. ಇವರೇ (ಕಾಂಗ್ರೆಸ್) ಸರ್ವ ಜನಾಂಗದ ಶಾಂತಿಯ ತೋಟದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲದಲ್ಲಿ ಗಲಭೆ ವಿಚಾರವಾಗಿ, ಶಾಂತಿ ಕಾಪಾಡುವಂತೆ ನಿನ್ನೆ ರಾತ್ರಿಯೇ ಮನವಿ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ಒಂದು ವರ್ಗವನ್ನು ಓಲೈಸುವ ಕೆಲಸ ಮಾಡುತ್ತಿದೆ. ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಲಘುವಾಗಿ ಮಾತನಾಡಿದ್ದಾರೆ. ಒಂದೂವರೆ ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಬಟ್ಟೆ ಅಂಗಡಿ ಮಾಲೀಕ ಹೇಳಿದ್ದಾರೆ. ಇದು ಸಣ್ಣ ಘಟನೆಯೇ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಾನು ಬೆಂಕಿ ಹಚ್ಚಿಲ್ಲ, ಆರಿಸಿದ್ದೇನೆ
ಬೆಂಕಿ ಹಚ್ಚುವ ಕೆಲಸವನ್ನು ನಾನು ಯಾವತ್ತೂ ಮಾಡಿಲ್ಲ. ಬೆಂಕಿ ಆರಿಸುವ ಕೆಲಸ ಮಾಡಿದ್ದೇನೆ. ನಾಗಮಂಗಲ ಪಟ್ಟಣದಲ್ಲಿ ಪೊಲೀಸ್ ವ್ಯವಸ್ಥೆಯ ವೈಫಲ್ಯ ಎದ್ದು ಕಾಣುತ್ತಿದೆ. ಮೊದಲೇ ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆ ಆಗುತ್ತಿತ್ತಾ? ಸರ್ವ ಜನಾಂಗದ ಶಾಂತಿಯ ತೋಟದ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಎಸೆಯುವ ಕೆಲಸ ಆಗಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ಮಾಡಿದವರು ಯಾರು? ನಾನು ಯಾವುದೇ 1 ಸಮುದಾಯ ಓಲೈಸುವ ಕೆಲಸ ಮಾಡುತ್ತಿಲ್ಲ. ತಲ್ವಾರ್ ಹಿಡಿದು ಓಡಾಡ್ತಿದ್ದಾರೆ, ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಇದರಲ್ಲೇ ಗೊತ್ತಾಗುತ್ತದೆ ನೀವು ಹೇಗೆ ಆಡಳಿತ ನಡೆಸುತ್ತಿದ್ದೀರಿ ಎಂಬುದಾಗಿ. ನಿಮ್ಮ ಆಡಳಿತ ವೈಫಲ್ಯ ಇಟ್ಟುಕೊಂಡು ನನಗೆ ಬುದ್ಧಿ ಹೇಳಬೇಡಿ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಾನು ಸಿಎಂ ಆಗಿದ್ದಾಗ ಕೋಮು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿಲ್ಲ. ಈ ಹಿಂದೆ ನಾನು ಹೇಗೆ ಆಡಳಿತ ನಡೆಸಿದ್ದೇನೆಂಬುದು ಕಡತದಲ್ಲೇ ಇದೆ. ಪ್ರಮುಖ ಆರೋಪಿ ಈಗಾಗಲೇ ಪರಾರಿಯಾಗಿರುತ್ತಾನೆ. ಜೀವನಕ್ಕೆ ಆಧಾರವಾಗಿದ್ದವರನ್ನು ಬಂಧಿಸಿ ಜೈಲಿನಲ್ಲಿ ಇಟ್ಟಿದ್ದಾರೆ. ನಾಳೆ ನಾಗಮಂಗಲಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ. ಸ್ಥಳಕ್ಕೆ ಭೇಟಿ ನೀಡಿ ಜನರಿಂದಲೇ ಮಾಹಿತಿ ಪಡೆಯುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.