ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಧರ್ಮ ಪ್ರತಿಯೊಬ್ಬ ಮನುಷ್ಯನಿಗೂ ಅತ್ಯಂತ ಅಗತ್ಯವಾಗಿ ಬೇಕು. ಆದರೆ, ಅದರ ಹೆಸರಿನಲ್ಲಿ ಮೂಢ ನಂಬಿಕೆ ಬಿತ್ತಿ ರಾಜಕೀಯ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಸುಡುಗಾಡಮ್ಮ ಮತ್ತು ವೀರಭದ್ರೇಶ್ವರ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ರಾಜಕೀಯ ನಾಯಕರು ಧರ್ಮವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದು ಇದು ಅಪಾಯಕಾರಿ ಯಾವ ದೇಶದಲ್ಲಿ ಧರ್ಮದೊಳಗೆ ರಾಜಕಾರಣ ಬೆರೆಸುತ್ತಾರೊ ಅವುಗಳು ಸರ್ವ ನಾಶವಾದ ಉದಾಹರಣೆ ನಮ್ಮ ಮುಂದಿದೆ ಎಂದರು.
ರಾಜಕಾರಣಿಗಳು ಧರ್ಮ ಕಾಪಾಡಲು ಸಾಧ್ಯವಿಲ್ಲ. ಆದರೂ ಕೆಲವರು ಅದನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರುಪಯೋಗ ಮಾಡಿಕೊಂಡು ತಮ್ಮ ಮೂಲ ಉದ್ದೇಶ ಮರೆಯುತ್ತಿದ್ದಾರೆ ಇದು ಸಮಾಜಕ್ಕೆ ಮಾರಕ ಎಂದ ವಿಧಾನ ಪರಿಷತ್ ಸದಸ್ಯರು ಇಂತಹಾ ನಿರ್ಧಾರದಿಂದ ಪಾಕಿಸ್ತಾನ, ಸಿರಿಯಾ ಮತ್ತು ಇರಾನ್ದೇಶಗಳ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡಿದರೆ ಎಲ್ಲರೂ ಪರಸ್ಪರ ಸಹಕಾರ ಮತ್ತು ಸಹೋದರತ್ವದಿಂದ ಬದುಕಲು ಸಾಧ್ಯವಾಗುತ್ತದೆಂದ ಡಾ.ಯತೀಂದ್ರ ಸಿದ್ದರಾಮಯ್ಯ, ಮನುಷ್ಯ ಸಮಾಜ ಮತ್ತು ಸಂಘ ಜೀವಿಯಾಗಿದ್ದು ಆತನಿಗೆ ಆಧ್ಯಾತ್ಮಿಕ ಆರೋಗ್ಯದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಇಂದಿನ ಆದುನಿಕ ಯುಗದಲ್ಲಿ ಒತ್ತಡದ ಜೀವನದ ನಡುವೆ ನಾವು ಬದುಕುತ್ತಿದ್ದು ಶಾಂತಿ ಹಾಗೂ ನೆಮ್ಮದಿಯ ಅವಶ್ಯಕತೆ ಇರುವುದರಿಂದ ನೆಮ್ಮದಿಯ ಕೇಂದ್ರಗಳಾಗಿರುವ ದೇವಾಲಯಗಳ ನಿರ್ಮಾಣ ಉತ್ತಮವಾದ ಕೆಲಸವೆಂದು ತಿಳಿಸಿದಲ್ಲದೆ ಪ್ರತಿ ಗ್ರಾಮಗಳಲ್ಲೂ ಈ ರೀತಿಯ ಕಾರ್ಯಕ್ರಮಗಳು ನಡೆಯಬೇಕು ಎಂದು ನುಡಿದರು.
ನುಡಿದಂತೆ ನಡೆವ ಮುಖ್ಯಮಂತ್ರಿಗಳು : ರಾಜ್ಯದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯನವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿ ನುಡಿದಂತೆ ನಡೆಯುತ್ತಿರುವ ಜನ ನಾಯಕರಾಗಿದ್ದಾರೆ. ಇಂತಹಾ ನಾಯಕರಿಗೆ ತಾವು ಸದಾ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದರು.
ಕ್ಷೇತ್ರದ ಶಾಸಕರಾಗಿರುವ ಡಿ.ರವಿಶಂಕರ್ ಅವರು ಕ್ಷೇತ್ರದ ಅಭಿವೃದ್ಧಿಗೆ ಕಟಿಬದ್ದರಾಗಿ ಕೆಲಸ ಮಾಡುತ್ತಿದ್ದು ಜನ ಪರವಾದ ಶಾಸಕರಾಗಿದ್ದಾರೆ ಅವರನ್ನು ಜನತೆ ನಿರಂತರವಾಗಿ ಬೆಂಬಲಿಸಬೇಕು ಆಗ ಕ್ಷೇತ್ರ ಸಮಗ್ರವಾಗಿ ಅಭಿವೃದ್ದಿ ಕಾಣಲಿದೆ ಈ ವಿಚಾರವನ್ನು ಮತದಾರರು ಅರಿಯಬೇಕೆಂದು ಕೋರಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ನೀಡುವ ಗ್ರಾಮಗಳು ಕಳೆದ ೧೫ ವರ್ಷಗಳಿಂದ ಅಭಿವೃದ್ದಿಯಲ್ಲಿ ಕುಂಠಿತಗೊಂಡಿದ್ದು ಅವುಗಳ ಅಭಿವೃದ್ದಿಗೆ ಹೆಚ್ಚಿನ ಅನುದಾನ ಕೊಡಿಸಬೇಕೆಂದು ವಿಧಾನಪರಿಷತ್ ಸದಸ್ಯರಿಗೆ ಮನವಿ ಮಾಡಿದರು. ಕೆ.ಆರ್.ನಗರ ತಾಲೂಕಿನ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿರುವ ಕಪ್ಪಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಲು ೨೫ ಕೋಟಿ ಅನುದಾನ ನೀಡಲು ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹೆಬ್ಬಾಳು ಹೋಬಳಿಯ ಕೆಸ್ತೂರು ಗೇಟ್ ಬಳಿ ಇರುವ ಕಾವೇರಿ ನದಿಯ ತಟದಲ್ಲಿ ಏತ ನೀರಾವರಿ ಕಾಮಗಾರಿಗೆ ಕಳೆದ ಬಜೆಟ್‌ನಲ್ಲಿ ೬೦ ಕೋಟಿ ಹಣ ಮೀಸಲಿಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಪ್ರಕಟಿಸಿದರು. ಕಾಗಿನೆಲೆ ಕನಕ ಗುರುಪೀಠದ ಕೆ.ಆರ್.ನಗರ ಶಾಖಾ ಮಠದ ಶಿವಾನಂದಪುರಿ ಶ್ರೀಗಳು ಆಶೀರ್ವಚನ ನೀಡಿದರು. ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಮಾತನಾಡಿ, ದೇವಾಲಯದ ಇತಿಹಾಸ ಮತ್ತು ವಿಶೇಷತೆಯ ಬಗ್ಗೆ ತಿಳಿಸಿದರು.
ದೇವಾಲಯ ಉದ್ಘಾಟನೆಯ ಅಂಗವಾಗಿ ಸುಡುಗಾಡಮ್ಮ ಮತ್ತು ವೀರಭದ್ರೇಶ್ವರ ದೇವಾಲಯದಲ್ಲಿ ಮುಂಜಾನೆಯಿಂದಲೆ ವಿಶೇಷ ಪೂಜೆ ಮತ್ತು ಹೋಮ ಹವನ ನಡೆಸಿ ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರು ಡಿಡಿಪಿಐ ಎಸ್.ಟಿ.ಜವರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ರಮೇಶ್, ತಾ.ಪಂ.ಮಾಜಿ ಅಧ್ಯಕ್ಷೆ ಹರಿಣಿಪ್ರಕಾಶ್, ಮಾಜಿ ಸದಸ್ಯೆ ರಮ್ಯಸತೀಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚರ್‍ನಹಳ್ಳಿಶಿವಣ್ಣ, ದೇವಾಲಯ ಸಂಯೋಜಕ ಆರ್.ಭಾಸ್ಕರ್, ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ವೈಧ್ಯ ಡಾ.ಆರ್.ವೀರಣ್ಣ, ಬೆಂಗಳೂರು ಮದರ್ ಡೈರಿ ಕಾರ್ಯದರ್ಶಿ ಆರ್.ಕನಕರಾಜು, ಗ್ರಾಮದ ಯಜಮಾನರಾದ ಕೆ.ಶಿವಚಂದ್ರ, ಬಸವರಾಜು, ಜವರೇಗೌಡ, ಕಾಳೇಗೌಡ, ಮೇಲ್ವಿಚಾರಕರಾದ ಕೆ.ಎಲ್.ಲೋಕೇಶ್, ಕೆಸ್ತೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಶ್ರೀನಿವಾಸ್, ಮಾಜಿ ಅಧ್ಯಕ್ಷರಾದ ಕೆ.ಎಂ.ಜಗದೀಶ್, ನಾಗಮಣಿಸತೀಶ್ ಮತ್ತು ಗ್ರಾಮಸ್ಥರು ಹಾಜರಿದ್ದರು.