ಮಹಾರಾಷ್ಟ್ರ: ಗಮನ ಸೆಳೆದಿರುವ ಎರಡು ರಾಜ್ಯಗಳ ಚುನಾವಣೆಯ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ ಮುನ್ನಡೆ ಸಾಧಿಸಲಿದೆ. ಮಹಾರಾಷ್ಟ್ರದಲ್ಲಿ ಸರ್ಕಾರ ಉಳಿಸಿಕೊಳ್ಳಲಿದ್ದರೆ ಜಾರ್ಖಂಡ್‌ನಲ್ಲಿ ಹೊಸ ಸರ್ಕಾರ ನಿರ್ಮಿಸಲಿದೆ.
ಜಿದ್ದಾಜಿದ್ದಿನ ಹೋರಾಟದ ಮೂಲಕ ಗಮನ ಸೆಳೆದಿದ್ದ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಅಂದಾಜಿಸಿವೆ. ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟವು ಗದ್ದುಗೆ ಏರಲಿದೆ ಎಂದು ಎರಡು ಸಮೀಕ್ಷೆಗಳು ಮಾತ್ರ ಅಂದಾಜಿಸಿವೆ . ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಹೀಗಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ಅಧಿಕಾರ ಕಳೆದುಕೊಳ್ಳುವ ಕಾಲ ಸನ್ನಿಹಿತ ಎಂದು ಅವರೆಲ್ಲರೂ ಅಂದಾಜಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಎಲ್ಲ ೨೮೮ ಸ್ಥಾನಗಳಿಗೆ ಹಾಗೂ ಜಾರ್ಖಂಡ್‌ನ ಎರಡನೇ ಹಂತದ ೩೮ ಕ್ಷೇತ್ರಗಳಿಗೆ ವೋಟಿಂಗ್ ನಡೆಯಿತು. ಜಾರ್ಖಂಡ್‌ನ ಮೊದಲ ಹಂತದ ಮತದಾನ ನವೆಂಬರ್ ೧೩ರಂದು ನಡೆದಿತ್ತು. ಮತದಾನ ಮುಗಿದ ಬೆನ್ನಲ್ಲೇ, ಮತಗಟ್ಟೆ ಸಮೀಕ್ಷೆಗಳು ಪ್ರಕಟಗೊಂಡವು. ಮತ ಎಣಿಕೆ ನವೆಂಬರ್ ೨೩ರಂದು ನಡೆಯಲಿದ್ದು ಸಂಜೆಯೊಳಗೆ ಫಲಿತಾಂಶ ದೊರಕಲಿದೆ.
ಉತ್ತರ ಪ್ರದೇಶದ ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯಲ್ಲಿಯೂ ಬಿಜೆಪಿ ಮುನ್ನಡೆ ಎಂದು ಸಮೀಕ್ಷೆಗಳು ಹೇಳಿವೆ. ಬಿಜೆಪಿ ೫-೭ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
೮೧ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಜೆಎಂಎಂ ಮೈತ್ರಿಕೂಟಕ್ಕೆ ಅಂದಾಜು ೫೩ ಸ್ಥಾನಗಳು ಸಿಗಲಿವೆ. ಎನ್‌ಡಿಎ ಮೈತ್ರಿಕೂಟ ಕೇವಲ ೨೫ ಸ್ಥಾನಗಳನ್ನು ಗಳಿಸಲಿದೆ. ಉಳಿದ ಪಕ್ಷಗಳು ೩ ಕ್ಷೇತ್ರಗಳಲ್ಲಿ ಜಯ ಗಳಿಸಲಿವೆ ಎಂದು ಆಯಕ್ಸಿಸ್ ಮೈ ಇಂಡಿಯಾ ಭವಿಷ್ಯ ನುಡಿದಿದೆ. ಆದರೆ, ಎನ್‌ಡಿಎ ಜಯ ಗಳಿಸಲಿದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ (ಶಿಂದೆ ಬಣ)-ಎನ್‌ಸಿಪಿ (ಅಜಿತ್ ಪವಾರ್ ಬಣ) ಮೈತ್ರಿಕೂಟ (ಮಹಾಯುತಿ) ಅಧಿಕಾರ ಮುಂದುವರಿಸಲಿದೆ ಎಂದು ಸಮೀಕ್ಷೆಗಳು ವಿವರಿಸಿವೆ.
ಹಲವಾರು ಸುದ್ದಿ ಸಂಸ್ಥೆಗಳೊಂದಿಗೆ ನಡೆಸಲಾದ ಮ್ಯಾಟ್ರಿಜ್ ಸಮೀಕ್ಷೆಯು ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಶೇ ೪೮ ಮತ ಸಿಗಲಿದ್ದು ೧೫೦ರಿಂದ ೧೭೦ ಕ್ಷೇತ್ರಗಳಲ್ಲಿ ಜಯ ಖಾತರಿ ಎಂದಿದೆ. ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಶೇ ೪೨ ಮತಗಳೊಂದಿಗೆ ೧೧೦-೧೩೦ ಸ್ಥಾನಗಳಿಸಬಹುದು ಎಂದಿದೆ. ಜಾರ್ಖಂಡ್‌ನಲ್ಲಿ ಎನ್‌ಡಿಎ ೪೨-೪೭ ಕ್ಷೇತ್ರಗಳಲ್ಲಿ ಹಾಗೂ ಇಂಡಿಯಾ ಒಕ್ಕೂಟವು ೨೫-೩೦ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದೂ ಅಂದಾಜಿಸಿದೆ.