ತಮಿಳುನಾಡಿನಲ್ಲಿನ ನೀರಿನ ಲಭ್ಯತೆ ಬಗ್ಗೆ ರಾಜ್ಯದಿಂದ ಪರಿಶೀಲಿಸಲು ಮುಂದಾಗಬೇಕು: ರಮೇಶ್‌ಗೌಡ
ಚನ್ನಪಟ್ಟಣ: ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ೧೦೦ ದಿನಗಳ ಪ್ರತಿಜ್ಞೆಯ ಹೋರಾಟ ನಡೆಸುತ್ತಿದ್ದು ಸೋಮವಾರ ನಡೆದ ಹನ್ನೆರಡನೇ ದಿನದ ಹೋರಾಟಕ್ಕೆ ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.
ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು ಕಾವೇರಿ ನಮ್ಮದು ಕಾವೇರಿಗಾಗಿ ಪ್ರತಿಯೊಬ್ಬರೂ ಹೋರಾಟದ ಹೆಜ್ಜೆ ಹಾಕಬೇಕು, ಯುವಶಕ್ತಿ ಹೋರಾಟಕ್ಕೆ ಮುಂದಾದರೆ ಯಾವ ಶಕ್ತಿಯೂ ಅವರನ್ನು ತಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಯುವಶಕ್ತಿಯನ್ನು ಹೋರಾಟದ ದಾರಿ ಹಿಡಿಯಲು ಅವಕಾಶ ನೀಡದೆ ಕೇಂದ್ರ ಸರ್ಕಾರವೇ ಕಾವೇರಿ ನೀರಿನ ಸಮಸ್ಯೆ ಪರಿಹರಿಸಲು ಮಧ್ಯಪ್ರವೇಶ ಮಾಡಬೇಕು ಎಂದು ಆಗ್ರಹಿಸಿದರು.
ಕಕಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕಾವೇರಿ ಸಂಕಷ್ಟ ಸೂತ್ರಕ್ಕೆ ಮೇಕೆದಾಟು ಯೋಜನೆಯೊಂದೇ ಮಾರ್ಗವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಮೇಕೆದಾಟು ಯೋಜನೆಗೆ ಕೂಡಲೇ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಜೊತೆಗೆ ನಮ್ಮ ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ತಮಿಳುನಾಡಿನ ಭವಾನಿ, ಮೆಟ್ಟೂರು ಜಲಾಶಯಗಳು ಭರ್ತಿಯಾಗುವ ಜೊತೆಗೆ ಲಕ್ಷಾಂತರ ಎಕ್ಟೇರ್‌ಗೆ ನೀರು ಪೂರೈಸಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ನೀರಾವರಿ ಇಲಾಖೆಯ ಅಧಿಕಾರಿಗಳು, ತಜ್ಞರು ತಮಿಳುನಾಡಿಗೆ ತೆರಳಿ ಅಲ್ಲಿನ ನೀರಿನ ಲಭ್ಯತೆಯನ್ನು ಸಮಗ್ರವಾಗಿ ಪರಿಶೀಲನೆ ಮಾಡಿ ಕಾವೇರಿ ನೀರಿ ಹಂಚಿಕೆ ಪ್ರಾಧಿಕಾರದ ಮುಂದೆ ಈ ವರದಿ ಮಂಡಿಸಲು ಮುಂದಾಗಬೇಕು, ಜೊತೆಗೆ ಈ ವರದಿಯು ಮೇಕೆದಾಟು ಯೋಜನೆಗೂ ಸಹಕಾರಿ ಆಗಲಿದೆ ಎಂದು ಆಗ್ರಹಿಸಿದರು.
ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ನಮ್ಮ ರಾಜ್ಯದ ರಾಜಕಾರಣಿಗಳಿಗೆ ನೆಲ. ಜಲದ ಉಳಿಸಿಕೊಳ್ಳುವ ಬದ್ದತೆ ಇಲ್ಲ. ಇವರೆಲ್ಲಾ ಸಮಸ್ಯೆ ಬಂದಾಗ ಈ ಬಗ್ಗೆ ಅಧಿಕಾರಿಗಳಿಂದ ವರದಿ ತಯಾರಿಸುತ್ತಾರೆ. ಆದರೆ ತಮಿಳುನಾಡಿನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರದಲ್ಲೇ ಅಲ್ಲಿನ ಸರ್ಕಾರ ತಂಡವನ್ನು ರಚಿಸಿದ್ದು, ಆ ತಂಡವು ಪ್ರತಿ ತಿಂಗಳು ನಮ್ಮ ರಾಜ್ಯದಲ್ಲಿನ ನೀರಿನ ಲಭ್ಯತೆ, ಮಳೆಯ ಪರಿಮಾಣ ಸೇರಿದಂತೆ ಸಂಪೂರ್ಣ ವರದಿಯನ್ನು ಕಲೆಹಾಕುತ್ತಿದ್ದು ಸಮಯಕ್ಕೆ ಸರಿಯಾಗಿ ಈ ವರದಿಯನ್ನು ಉಪಯೋಗ ಮಾಡಿಕೊಳ್ಳುತ್ತಿದೆ. ಇಂತಹ ಬದ್ದತೆ ನಮ್ಮ ರಾಜ್ಯದ ರಾಜಕಾರಣಿಗಳಿಗೆ ಬಂದಾಗ ಮಾತ್ರ ಕಾವೇರಿಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಕಕಜವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಉಪಾಧ್ಯಕ್ಷ ಬೆಂಕಿ ಶ್ರೀಧರ್, ಬೆಂಗಳೂರು ಕಾರ್ಯಾಧ್ಯಕ್ಷ ಚಂದ್ರೇಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ರ‍್ಯಾಂಬೋ ಸೂರಿ, ಚಿಕ್ಕೇನಹಳ್ಳಿ ಸುಧಾಕರ್, ಚಿನ್ಮಯ್, ಸೇರಿದಂತೆ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಭಾಗವಹಿಸಿದ್ದರು.