ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಗ್ರಾಮದೇವತೆ ಶ್ರೀ ದಿಡ್ಡಿಯಮ್ಮ ದೇವಿಯ ದೇವಸ್ಥಾನದಲ್ಲಿ ಕೊನೆ(ವ್ರತ) ಪೂಜಾ ಮಹೋತ್ಸವ ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತ್ತು.
ಕಳೆದ ಫೆಬ್ರವರಿ ತಿಂಗಳಲ್ಲಿ ಶ್ರೀ ದಿಡ್ಡಿಯಮ್ಮ ದೇವಿಯ ಪ್ರತಿಷ್ಠಾಪನೆ ಮತ್ತು ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು. ಇದಾದ ಬಳಿಕ ಗ್ರಾಮದಲ್ಲಿ ಭಕ್ತಾಧಿಗಳು ೪೮ ದಿನಗಳ ಕಾಲದ ವ್ರತವನ್ನು ಆಚರಣೆ ಆರಂಭಿಸಿದರು. ಶುಕ್ರವಾರ ವ್ರತಕ್ಕೆ ಅಂತ್ಯವಾದ ಹಿನ್ನಲೆ ದೇವಿಯ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ಗಂಗಾಪೂಜೆ ನೆರವೇರಿಸಿ, ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಮೂಲಸ್ಥಾನವಾದ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ತಂದು ಇರಿಸಲಾಯಿತು. ಕಣಗಾಲು ಸೇರಿದಂತೆ ಸುತ್ತಮುತ್ತ ಗ್ರಾಮದ ಭಕ್ತಾಧಿಗಳು ಆಗಮಿಸಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡರು. ದೇವಸ್ಥಾನ ಸಮಿತಿವತಿಯಿಂದ ಬಂದಂತಹ ಭಕ್ತರಿಗೆ ಪ್ರಸಾದ ನೀಡಲಾಯಿತು.
ತಾಲೂಕು ಶರಣ್ಯ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಕುಮಾರಶೆಟ್ಟಿ ಮಾತನಾಡಿ ಶ್ರೀ ದಿಡ್ಡಿಯಮ್ಮ ದೇವಿಯು ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಗೆ ಶಕ್ತಿದೇವತೆ ಎಂದೇ ಪ್ರಸಿದ್ಧಿ ಹೊಂದಿದೆ. ದೇವಿಯ ದೇವಸ್ಥಾನ ಪ್ರತಿಷ್ಠಾಪನೆಯಿಂದ ಹಿಡಿದು ದೇವಿಯ ವ್ರತ ಆಚರಣೆಯವರೆಗೆ ಸಮಿತಿಯವರು, ದಾನಿಗಳು ಹಾಗೂ ಭಕ್ತರು ಸಾಕಷ್ಟು ಸಹಕಾರ ನೀಡಿದ್ದಾರೆ. ದೇವಿಯನ್ನು ನಂಬಿ ಆರಾಧನೆ ಮಾಡಿದರೆ ಖಂಡಿತ ತಾಯಿ ಎಲ್ಲರಿಗೂ ಒಳಿತು ಮಾಡುತ್ತಾಳೆ. ಸಹಕಾರ ನೀಡಿದಂತಹ ಎಲ್ಲರಿಗೂ ಧನ್ಯವಾದಗಳು ಎಂದರು.