ಕೆ.ಆರ್.ನಗರ: ಸಹಕಾರ ಇಲಾಖೆಯ ನಿಯಮದಂತೆ ಸಂಘದ ಆಡಳಿತ ನಡೆಸದೆ ಕಳೆದ ಆರು ವರ್ಷಗಳಿಂದ ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿರುವ ಚರ‍್ನಹಳ್ಳಿಶಿವಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜತೆಗೆ ಆಡಳಿತ ಮಂಡಳಿ ವಿರ್ಸಜನೆ ಮಾಡಬೇಕು ಎಂದು ಎಪಿಎಂಸಿ ಮಾಜಿ ನಿರ್ದೇಶಕ ಕುಪ್ಪೆಪ್ರಕಾಶ್ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಯಮಾನುಸಾರ ಪ್ರತಿ ವರ್ಷ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ನಡೆಸಬೇಕು, ಆದರೆ ಅಧ್ಯಕ್ಷರು ಈವರೆಗೂ ಒಂದು ಸಭೆಯನ್ನು ಕರೆದಿಲ್ಲ. ಜತೆಗೆ ಸಮಾಜಕ್ಕೆ ಸಂಘದಲ್ಲಿ ನಡೆಯುತ್ತಿರುವ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.
ಶಿವಣ್ಣನವರನ್ನ ಅಧ್ಯಕ್ಷರನ್ನಾಗಿ ಮತ್ತು ಹಲವು ಮಂದಿ ನಿರ್ದೇಶಕರನ್ನ ಏಕಪಕ್ಷೀಯವಾಗಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್‌ರವರು ನೇಮಕ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಸಮಾಜದ ಮುಖಂಡರು ಕುರುಬರ ಸಂಘದ ಅಧ್ಯಕ್ಷರ ನಡವಳಿಕೆಯ ಬಗ್ಗೆ ಮಾಹಿತಿ ನೀಡಿ ಆ ಸಮರ್ಪಕ ಆಡಳಿತ ಮಂಡಳಿ ವಿಸರ್ಜನೆಗೆ ಆಗ್ರಹ ಕೊಡಿಸುವಂತೆ ಕೋರಲಾಗಿದ್ದರೂ ವಿಶ್ವನಾಥ್‌ರವರು ಕ್ರಮ ವಹಿಸಿಲ್ಲ ಎಂದು ಆರೋಪಿಸಿದರು.
ಸಂಗೋಳ್ಳಿ ರಾಯಣ್ಣ ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರದಿಂದ, ಚುನಾಯಿತ ಸದಸ್ಯರ ಅನುದಾನ, ಮತ್ತು ಸಮಾಜದ ಮುಖಂಡರುಗಳಿoದ ಹಣ ವಸೂಲಿ ಮಾಡಿ ಭವನ ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ ನೆಲಸಮಗೊಳಿಸಲಾದ ಹಳೆಯ ಸಮುದಾಯ ಭವನದ ಸಾಮಾಗ್ರಿಗಳನ್ನು ಮಾರಾಟ ಮಾಡಿರುವ ಅಧ್ಯಕ್ಷರು ಈವರೆಗೂ ಸಮಾಜಕ್ಕೆ ಲೆಕ್ಕಪತ್ರ ನೀಡಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಶಾಸಕ ಡಿ.ರವಿಶಂಕರ್‌ರವರ ಕುಟುಂಬದವರು ಕುರುಬ ಸಮುದಾಯವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ದೂರಿದ ಕುಪ್ಪೆ ಪ್ರಕಾಶ್ ಇವರಿಗೆ ಸಮಾಜದ ಹಿತ ಕಾಯುವ ಬದ್ದತೆ ಇಲ್ಲ ಎಂದರಲ್ಲದೆ ಮುಂದಾದರು ನಿಯಮಾನುಸಾರ ಮೂರು ವರ್ಷಕ್ಕೊಮ್ಮೆ ಸಂಘಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿ ಬದಲಾವಣೆ ಮಾಡಲು ತಾವುಗಳು ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಜಯರಾಮೇಗೌಡ, ಬ್ಯಾಡರಹಳ್ಳಿರಾಮೇಗೌಡ, ಮಂಚನಹಳ್ಳಿರವಿ, ಸಿದ್ದರಾಮೇಗೌಡ, ಹೊಸೂರುಕಲ್ಲಹಳ್ಳಿಸುರೇಶ್, ಹೆಚ್.ಪಿ.ಪರಶುರಾಮು, ಸಿದ್ದನಕೊಪ್ಪಲುತೋಟೇಗೌಡ, ರಮೇಶ್, ಬೀರೇಗೌಡ, ವೆಂಕಟೇಶ್ ಹಾಜರಿದ್ದರು.