ಮೂಲ್ಕಿ : ಪಂಚ ಗ್ಯಾರಂಟಿಗಳಿಂದ ಬಡ ಜನರಿಗೆ ಹೆಚ್ಚಿನ ಪ್ರಯೋಜನವಾಗಿರುವ ಜೊತೆಗೆ ಹಣಕಾಸಿನ ಚಲಾವಣೆಯಿಂದಾಗಿ ರಾಜ್ಯ ಸರ್ಕಾರವು ಅತಿ ಹೆಚ್ಚು ಜಿಎಸ್‌ಟಿ ನೀಡುವ ಎರಡನೇ ರಾಜ್ಯವಾಗಿ ಪರಗಣಿಸಿದೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಮೂಲ್ಕಿ ಗಾಂಧಿ ಮೈದಾನದಲ್ಲಿ ಮೂಲ್ಕಿ ತಾಲೂಕು ವತಿಯಿಂದ ನಡೆದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.
ಗ್ಯಾರಂಟಿ ಸಮಾವೇಶವು ಬಡ ಜನರ ಸಂತೋಷವನ್ನು ಆಚರಿಸುವ ಕಾರ್ಯಕ್ರಮವಾಗಿದ್ದು ಆಡಳಿತ ಪಕ್ಷವು ಉತ್ತಮ ಆಡಳಿತವನ್ನು ನೀಡುವ ಕಾರ್ಯ ಮಾಡಬೇಕು. ವಿಪಕ್ಷವು ಆಡಳಿತ ಪಕ್ಷದ ನ್ಯೂನತೆಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡಬೇಕು. ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಐದು ಗ್ಯಾರಂಟಿ ಯೋಜನೆಗಳನ್ನು ನೀಡಿ ಬಡ ವರ್ಗಕ್ಕೆ ಸಹಕಾರ ನೀಡುವ ಜೊತೆಗೆ ರೈತರಿಗೆ ಬೆಂಬಲ ಬೆಲೆ ನೀಡಿದ ರಾಜ್ಯ ಸರ್ಕಾರವು ಮುಂದಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದು ಹೇಳಿದರು.