Wednesday, September 17, 2025
Google search engine

Homeರಾಜ್ಯಸುದ್ದಿಜಾಲಪೋಷಣ್‌ ಅಭಿಯಾನ: ಪೌಷ್ಠಿಕ ಭಾರತದ ಕಡೆ ಹೆಜ್ಜೆ : ಸಚಿವ ಲಕ್ಷ್ಮೀ ಹೆಬ್ಬಾಳಕರ್

ಪೋಷಣ್‌ ಅಭಿಯಾನ: ಪೌಷ್ಠಿಕ ಭಾರತದ ಕಡೆ ಹೆಜ್ಜೆ : ಸಚಿವ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಸದೃಢ ಸಮಾಜ, ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಸಲುವಾಗಿ ಪೋಷಣ್‌ ಅಭಿಯಾನ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಮಕ್ಕಳಿಗೆ ಪೌಷ್ಠಿಕಾಂಶ ನೀಡುವ ಮೂಲಕ ದೇಶದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕರ್‌ ಕರೆ ನೀಡಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ನಗರ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೋಷಣ್ ಮಾಸಾಚರಣೆ- 2025 ರ ಅಂಗವಾಡಿ ಅನ್ನಪ್ರಾಶನ, ಅಕ್ಷರ ಅಭ್ಯಾಸ, ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮತ್ತು ವಿಕಲಚೇತನ ಫಲಾನುಭವಿಗಳಿಗೆ ಯಂತ್ರಚಾಲಿತ ವಾಹನಗಳ ವಿತರಣೆ ಮೊದಲಾದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಪೋಷಣ್‌ ಅಭಿಯಾನವನ್ನು ಈ ತಿಂಗಳು ಪೂರ್ತಿ ಪ್ರತಿ ಜಿಲ್ಲೆಯಲ್ಲೂ ಮಾಡಲಾಗುವುದು ಎಂದರು.

ಗೃಹಲಕ್ಷ್ಮೀ ಯೋಜನೆ ಯಶಸ್ಸಿಗೆ ಅಂಗನವಾಡಿ ಕಾರ್ಯಕರ್ತರೆ ಕಾರಣ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯಾದ್ಯಂತ ನೀಡಲಾಗುತ್ತಿದೆ. ಇಂಥ ಯೋಜನೆಯನ್ನು ಜಾರಿಗೆ ತರುವ ಅದೃಷ್ಟ ನನಗೆ ಒಲಿಯಿತು. ವಾರ್ಷಿಕ 30 ಸಾವಿರ ಕೋಟಿ ರೂಪಾಯಿಯ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಯಶಸ್ವಿಯಾಗಲು ಅಂಗನವಾಡಿ ಕಾರ್ಯಕರ್ತರೇ ಕಾರಣ. ಸ್ವತಃ ಮುಖ್ಯಮಂತ್ರಿಗಳೇ ಎಷ್ಟೋ ಬಾರಿ ನನ್ನ ಬಳಿ ಇದನ್ನು ಹೇಳಿದ್ದಾರೆ ಎಂದರು.

ನಾನು ಇಲಾಖೆಯ ಸಚಿವೆಯಾಗಿ ಬರುವುದಕ್ಕೂ ಮುನ್ನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಆಯ್ಕೆ ವೇಳೆ ವಿಧವೆಯರಿಗೆ ಕೇವಲ ಶೇಕಡ 5 ರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಇದೀಗ ವಿಧವೆಯರಿಗೆ ಯಾವುದೇ ನಿರ್ಬಂಧ ಇಲ್ಲದೇ ನೇರ ನೇಮಕಾತಿಗೆ ಅವಕಾಶ ನೀಡಲಾಗಿದೆ. ನೊಂದ ಮಹಿಳೆಯರಿಗೆ ಅನುಕೂಲ ಮಾಡುವ ಸಲುವಾಗಿ ಈ ನಿರ್ಧಾರ ಕೈಗೊಂಡಿರುವೆ ಎಂದು ಸಚಿವರು ಹೇಳಿದರು.

ಇಲಾಖೆಯ ನೌಕರರ ವೈಯಕ್ತಿಕ ಹಾಗೂ ಸಂಬಂಧಿಕರ ಕೆಲಸ ಕಾರ್ಯಗಳನ್ನು ನಾನು ಮಾಡಿಕೊಡುವೆ. ಅದು ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಯೇ ಆಗಿರಲಿ. ಅದನ್ನು ಮಾಡಿಕೊಡುವ ಜವಾಬ್ದಾರಿ ನನ್ನದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂದರೆ ನಂಬರ್‌ 12, 14ನೇ ಸ್ಥಾನ ಎನ್ನುವ ಮಾತಿತ್ತು. ನಾನು ನಮ್ಮ ಇಲಾಖೆಯನ್ನು ಉತ್ತಮ ಸ್ಥಾನಕ್ಕೇರಿಸುವ ಕೆಲಸ ಮಾಡುತ್ತಿದ್ದೇನೆ. ಈಗ ಇಲಾಖೆಗೆ ಎಲ್ಲಿಲ್ಲದ ಮಹತ್ವ ಬಂದಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಹೇಳಿದರು.

ಇದರ ಜೊತೆಗೆ ಪದವಿ ಪಡೆದಿರುವ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಬೇರೆ ಬೇರೆ ಹಂತದಲ್ಲಿರುವ ಸಿಬ್ಬಂದಿಗೆ ಒಂದು ಬಾರಿ ಬಡ್ತಿ ನಿಯಮದಡಿ ಮೇಲ್ವಿಚಾರಕ ಹುದ್ದೆಗೆ ಬಡ್ತಿ ನೀಡಲಾಗುವುದು. ಇದಕ್ಕಾಗಿ 400 ಜನರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು.

ಸಚಿವರು ಕೇವಲ ಆದೇಶ ಮಾಡದೆ, ಕೇಂದ್ರ ಸರ್ಕಾರದ ಮನವೊಲಿಸಿ ಸುಮಾರು 17 ಸಾವಿರ ಸಕ್ಷಮ್‌ ಅಂಗನವಾಡಿ ಕೇಂದ್ರಗಳಿಗೆ ಅನುದಾನ ತಂದರು. ಕೇಂದ್ರದಿಂದ 50 ರಷ್ಟು ಅನುದಾನ, ಜೊತೆಗೆ ಕರ್ನಾಟಕ ಸರ್ಕಾರ ಕೂಡ ಉಳಿದ 50 ರಷ್ಟು ಅನುದಾನ ನೀಡಿದೆ. ಪ್ರತಿಯೊಂದು ಹಂತದಲ್ಲೂ ಇಲಾಖೆಯ ಕೆಲಸಗಳನ್ನು ಸಚಿವರು ಉತ್ತಮವಾಗಿ ಮಾಡಿಕೊಂಡು ಬರುತ್ತಿದ್ದಾರೆ ಎಂದು ಚನ್ನರಾಜ್‌ ಹಟ್ಟಿಹೊಳಿ ಅವರು ಹೇಳಿದರು.

ಇಲಾಖೆಯ ಮೂಲ ಉದ್ದೇಶ ಮಕ್ಕಳಿಗೆ ಪೌಷ್ಠಿಕತೆ ನೀಡುವುದು. ಈ ಹಿನ್ನೆಲೆಯಲ್ಲಿ ಮಾಡುತ್ತಿರುವ ಮಾಸಾಚರಣೆಯ ವೇಳೆ ಇಲಾಖೆಯ ಕಾರ್ಯಕರ್ತರು ಕಟ್ಟುನಿಟ್ಟಾಗಿ ಮಾಡಬೇಕು, ಮುಂದಿನ ದಿನಗಳಲ್ಲಿ ಸಚಿವರು ಉತ್ತಮ ಯೋಜನೆಗಳನ್ನು ತರಲಿದ್ದಾರೆ, ಇನ್ನೂ ಎತ್ತರಕ್ಕೆ ಇಲಾಖೆಯನ್ನು ಕೊಂಡೊಯ್ಯಲಿದ್ದಾರೆ, ನಿಮ್ಮ ಆಶೀರ್ವಾದ ಸಚಿವರ ಮೇಲಿರಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐಎಎಸ್‌ ಅಧಿಕಾರಿ ಅಭಿನವ್‌ ಜೈನ್‌, ಇಲಾಖೆಯ ಉಪ ನಿರ್ದೇಶಕರಾದ ಚೇತನಕುಮಾರ್ ಎಂ.ಎನ್, ಇಲಾಖೆಯ ನಿರೂಪಣಾಕಾಧಿಕಾರಿ ಅನಿಲ್‌ ಕುಮಾರ ಹೆಗಡೆ, ಡಿಸಿಪಿಒ ಪರ್ವಿನ್ ಕೌಸರ್, ಮಹಿಳಾ ಕಲ್ಯಾಣ ಅಧಿಕಾರಿ ಕಾಂಚನಾ ಅಮರೆ, ನಾಮದೇವ ಬಿಲ್ಕರ್, ಮಾಜಿ ತಾಲೂಕಾ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಎಲ್ಲ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಲವಿಕಾಸ ಸಲಹಾ ಸದಸ್ಯರು, ಅಂಗವಾಡಿಯ ಕಾರ್ಯಕರ್ತೆಯರು, ಸಹಾಯಕಿಯರು, ವಿಕಲಚೇತನ ಫಲಾನುಭವಿಗಳುಮಾಜಿ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಗರ್ಭಿಣಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular