ಮದ್ದೂರು: ವಿದ್ಯಾರ್ಥಿ ಜೀವನದ ಗುಣಮಟ್ಟ ಹಾಗೂ ಸಾಧನೆಯು ಅವನು ಎಷ್ಟು ಏಕಾಗ್ರತೆಯನ್ನು ಹೊಂದಿರುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದ ಮಂಡ್ಯ ಲಯನ್ಸ್ ಪಿಡಿಎಫ್ ಸಂಸ್ಧೆಯ ಅಧ್ಯಕ್ಷ ಸಿ.ಪಿ.ಅನಂತ್‌ಕುಮಾರ್ ಹೇಳಿದರು.
ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಕಲಿಕಾ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡಿ ವಿದ್ಯಾರ್ಥಿಗಳ ಕಲಿಕೆ ಮತ್ತು ಜ್ಞಾನ ಏಕಾಗ್ರತೆಯ ಕೌಶಲ್ಯವಾಗಿದ್ದು ನಿರ್ದಿಷ್ಟವಾದ ಗುರಿಯನ್ನು ಹೊಂದಿ ನಿರಂತರ ಅಭ್ಯಾಸ ನಡೆಸುವ ಮೂಲಕ ಗುರಿಯನ್ನ ಮುಟ್ಟಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಬೇಕೆಂದರು.
ಶಾಲೆಗಳು ಸಹ ವಿದ್ಯಾರ್ಥಿಗಳ ಮೇಲೆ ಅನಾವಶ್ಯಕ ಒತ್ತಡಗಳನ್ನು ಹೇರುತ್ತಿರುವುದು ಸರಿಯಲ್ಲ ಎಂದ ಅವರು ಸ್ವಾಮಿ ವಿವೇಕಾನಂದರ ಆಶಯದಂತೆ ಶಿಕ್ಷಣ ನೀಡುವಾಗ ವಿದ್ಯಾರ್ಥಿಯ ಏಕಾಗ್ರತೆ ವೃದ್ದಿಗೆ ವಿಶೇಷ ತರಬೇತಿ ನೀಡಿದರೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸುಗಳಿಸಬಹುದೆಂದು ಅಭಿಪ್ರಾಯ ಪಟ್ಟರು.
ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳ ಅಭ್ಯಾಸವು ಕೇವಲ ಪರೀಕ್ಷೆಗಳಿಗೆ ಸೀಮಿತವಾಗದೆ ಧನಾತ್ಮಕ ಆಲೋಚನೆಗಳನ್ನು ಬೆಳೆಸಿಕೊಂಡು ದೇಹ ಮತ್ತು ಮನಸ್ಸನ್ನು ಸದಾ ಚಟುವಟಿಕೆಯಲ್ಲಿ ಇಟ್ಟುಕೊಂಡು ಒತ್ತಡವಿಲ್ಲದೆ ಅಭ್ಯಾಸ ನಡೆಸಬೇಕೆಂದರು.
ಈ ವೇಳೆ ಲಯನ್ ಮಂಜು, ಮಾಜಿ ತಾಲ್ಲೂಕು ಕ.ಸ.ಪ. ಅಧ್ಯಕ್ಷ ಕೆ.ಎಸ್. ಸುನೀಲ್ ಕುಮಾರ್, ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ನಂದಿನಿ, ಉಪನ್ಯಾಸಕರಾದ ನವೀನ್‌ಕುಮಾರ್, ಮೋಹನ್‌ಕುಮಾರ್, ಸುದರ್ಶನ್, ಯಶಸ್ವಿನಿ, ಚೌಡಯ್ಯ ಹಾಗೂ ಸಂಜನ ಹಾಜರಿದ್ದರು.
