ಮೈಸೂರು: ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಸದೃಢವಾದ ಆಲೋಚನೆಗಳಿರಬೇಕು ಎಂದು ಜಿಲ್ಲಾಧಿಕಾರಿಗಳಾದ ಲಕ್ಷ್ಮೀಕಾಂತರೆಡ್ಡಿಯವರು ಮೈಸೂರು ಶ್ರೀ ಸುತ್ತೂರು ಮಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಲಕ್ಕಣ್ಣ ದಂಡೇಶನ ಶಿವತತ್ತ್ವ ಚಿಂತಾಮಣಿ ಕುರಿತ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ತಿಳಿಸಿದರು.
ವೇಗವಾಗಿ ಸಾಗುತ್ತಿರುವ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ. ಅವೆಲ್ಲವನ್ನೂ ಮರಳಿ ಪಡೆಯಲು ಶ್ರಾವಣಮಾಸ ಅತ್ಯಂತ ಪ್ರಶಸ್ತವಾದುದು. ಈ ತಿಂಗಳಿನಲ್ಲಿ ಅನೇಕ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಸುತ್ತೂರು ಶ್ರೀಮಠದ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಅತ್ಯಂತ ಪ್ರಶಂಸನೀಯವಾದುದು ಎಂದು ತಿಳಿಸಿದರು.
ನಗರ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್‌ರವರು ನಾವೆಲ್ಲರೂ ವಿಶ್ರಾಂತಿ ಇಲ್ಲದ ಜೀವನವನ್ನು ಸಾಗಿಸುತ್ತಿದ್ದೇವೆ. ದೈಹಿಕವಾಗಿ ಆರೋಗ್ಯವಾಗಿದ್ದರು, ಮಾನಸಿಕವಾಗಿ ದುರ್ಬಲವಾದರೆ ಯಾವುದೇ ಪ್ರಯೋಜನವಿಲ್ಲ. ಮನಸ್ಸು ಸದೃಢಗೊಳ್ಳಬೇಕಾದರೆ ಇಂತಹ ಪ್ರವಚನ ಕಾರ್ಯಕ್ರಮಗಳು ಅತಿ ಅಗತ್ಯ. ಇಂದಿನ ಮಕ್ಕಳಲ್ಲಿ ತಾಳ್ಮೆಯಿಲ್ಲ, ಹಠಮಾರಿ ಧೋರಣೆ ಹೆಚ್ಚುತ್ತಿದೆ. ಅವರಿಗೆ ಇಂತಹ ನೈತಿಕ ಶಿಕ್ಷಣದ ಅಗತ್ಯವಿದೆ, ಹಾಗಾಗಿ ಅವರನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತರಬೇಕು ಎಂದರು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಎನ್. ರಘುನಂದನ್‌ರವರು ಶ್ರಾವಣಮಾಸ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ನೆನಪಿಸುವ ತಿಂಗಳು. ಜೀವನ ಕೇವಲ ವ್ಯಾವಹಾರಿಕವಾಗಿದೆ, ಮಾನವೀಯ ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರ ಭೌತಿಕ ಮತ್ತು ಮಾನಸಿಕ ಉನ್ನತಿಗಾಗಿ ಶ್ರೀಮಠ ಶ್ರಮಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮಿಗಳು ಭಗವಚ್ಚಿಂತನೆಯನ್ನು ಮಾಡಲು ಶ್ರಾವಣ ಮಾಸ ಸುಸಂದರ್ಭ. ಸುತ್ತೂರು ಶ್ರೀಮಠ ಸದಾ ಆಧ್ಯಾತ್ಮಿಕ ಚಟುವಟಿಕೆಗಳ ತಾಣ. ಮನಸ್ಸಿನ ದುಗುಡ-ದುಮ್ಮಾನಗಳು ದೂರವಾಗಬೇಕಾದರೆ ಇಂತಹ ಚಿಂತನೆಗಳನ್ನು ಕೇಳುವುದು ಅಗತ್ಯ. ಇಂದು ಒಳ್ಳೆಯದು ಮತ್ತು ಕೆಟ್ಟದ್ದು ಎಂಬುದು ಮನುಷ್ಯನ ಬೆರಳ ತುದಿಯಲ್ಲಿಯೇ ಇದೆ. ಯಾವುದನ್ನು ಆಯ್ಕೆ ಮಾಡಬೇಕು ಎಂಬುದನ್ನು ಅರಿಯಬೇಕು. ಮನುಷ್ಯ ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿರುವುದರಿಂದ ಅನೇಕ ದುರಂತಗಳು ನಡೆಯುತ್ತಿವೆ. ಮಾನವ ಜನ್ಮ ಸಾರ್ಥಕವಾಗಬೇಕಾದರೆ ಇಂತಹ ಉತ್ತಮ ವಿಚಾರಗಳನ್ನು ಆರ್ಜಿಸಬೇಕು ಎಂದು ತಿಳಿಸಿದರು.
ಡಾ. ಕೆ. ಅನಂತರಾಮುರವರು ಶ್ರಾವಣಕ್ಕೂ-ಶ್ರವಣಕ್ಕೂ ಅವಿನಾಭಾವ ಸಂಬಂಧವಿದೆ. ಈ ಮಾಸದಲ್ಲಿ ಸದ್ವಿಚಾರಗಳ ಚಿಂತನೆ ಮಾಡಿದರೆ ಸಾಲದು, ಬದುಕಿನಲ್ಲಿ ಅವುಗಳನ್ನು ಅಳವಡಿಸಿಕೊಳ್ಳಬೇಕು. ಸುಂಸ್ಕೃತರಾಗಿ ಬೆಳೆಯಲು ಇಂತಹ ಸತ್ಸಂಗಗಳು, ಪ್ರವಚನಗಳು ನಡೆಯುತ್ತಲೇ ಇರಬೇಕು. ಇದರಿಂದ ಚಿತ್ತಶುದ್ಧಿಯಾಗುತ್ತದೆ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಪೀಳಿಗೆಯಿಂದ ಪೀಳಿಗೆಗೆ ಬುದ್ಧಿ ಬೆಳೆಯುತ್ತಿದೆ, ಆದರೆ ವಿವೇಕ ಬೆಳೆಯುತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಸರಿಯಾದ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಯುವಜನರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಬೇಕು. ಬದುಕು ಉತ್ತಮ ಮೌಲ್ಯಗಳಿಂದ ರೂಪಗೊಳ್ಳಬೇಕು ಎಂದು ಹೇಳಿದರು.
ವಿದುಷಿ ಎಂ.ವಿ. ಶುಭಾ ರಾಘವೇಂದ್ರ ವಾಚನ ಮಾಡಿದರು. ರೀ ಎಸ್. ನಂದೀಶ್ ಸ್ವಾಗತಿಸಿದರು. ಶ್ರೀ ವೀರಭದ್ರಸ್ವಾಮಿ ವಂದಿಸಿದರು. ಕುಮಾರಸ್ವಾಮಿ ವಿರಕ್ತಮಠ ಕಾರ್ಯಕ್ರಮ ನಿರೂಪಿಸಿದರು. ಜೆಎಸ್‌ಎಸ್ ಲಲಿತಕಲಾ ವೃಂದದವರು ಪ್ರಾರ್ಥಿಸಿದರು. ಮೈಸೂರು ಶ್ರೀ ಸುತ್ತೂರು ಮಠದ ಸಿಬ್ಬಂದಿವರ್ಗದವರು ಸೇವಾರ್ಥ ನೆರವೇರಿಸಿದರು.