ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ಇಂದು ಮಧ್ಯಾಹ್ನ 12 ಗಂಟೆಗೆ ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿದೆ.
ನಿಕಟಪೂರ್ವ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಬಾಷಾ ಅವರನ್ನೇ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾಯಿಸಲು ಸಿದ್ಧತೆಗಳು ಜರುಗಿದ್ದವು ಎನ್ನಲಾಗಿದೆ.
ಆದರೆ, ಅನ್ವರ್ ಬಾಷಾ ವಿರುದ್ಧ ಸರಕಾರಿ ಖಬರಸ್ತಾನ್ ಜಮೀನು ಒತ್ತುವರಿ ಆರೋಪ ಇರುವುದರಿಂದ ಯಾವುದೇ ಕಾರಣಕ್ಕೂ ಅವರನ್ನು ಚುನಾಯಿಸಬಾರದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್, ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಸೈಯದ್ ಅಶ್ರಫ್ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಿ ಆಗ್ರಹಿಸಿದ್ದರು.
ಅಲ್ಲದೇ, ವಕ್ಫ್ ಬೋರ್ಡ್‌ಗೆ ಸರಕಾರದ ವತಿಯಿಂದ ಸದಸ್ಯರನ್ನು ನಾಮ ನಿರ್ದೇಶನ ಮಾಡುವಾಗಲೂ ಹಿರಿಯ ನಾಯಕರ ಜೊತೆ ಚರ್ಚೆ ಮಾಡದೆ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಏಕ ಪಕ್ಷಿಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಉಭಯ ನಾಯಕರು ಅಸಮಾಧಾನ ಹೊರಹಾಕಿದ್ದರು.
ಒಂದು ವೇಳೆ ಅನ್ವರ್ ಬಾಷಾ ಅವರನ್ನು ವಕ್ಫ್ ಬೋರ್ಡ್ ಗೆ ಪುನಃ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇ ಆದಲ್ಲಿ, ಅನ್ವರ್ ಬಾಷಾ ಹಾಗೂ ಇತರ ಸದಸ್ಯರ ವಿರುದ್ಧ ಭೂ ಒತ್ತುವರಿ, ಭೂ ಕಬಳಿಕೆ ಸೇರಿದಂತೆ ಇನ್ನಿತರ ಆಪಾದನೆಗಳ ದಾಖಲೆಗಳನ್ನು ಸರಣಿ ರೀತಿಯಲ್ಲಿ ಬಿಡುಗಡೆ ಮಾಡುವುದಾಗಿ ಮುಹಮ್ಮದ್ ಉಬೇದುಲ್ಲಾ ಶರೀಫ್ ಹಾಗೂ ಸೈಯದ್ ಅಶ್ರಫ್ ಎಚ್ಚರಿಕೆ ನೀಡಿದ್ದರು.
ಇದೀಗ ಸರಕಾರ ವಕ್ಫ್ ಬೋರ್ಡ್ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಾದ ಚುನಾವಣೆಯನ್ನು ಮುಂದೂಡುವ ಮೂಲಕ ಸಮುದಾಯದ ಹಿರಿಯ ನಾಯಕರಲ್ಲಿರುವ ಅಸಮಾಧಾನ ಶಮನ ಮಾಡಲು ಯತ್ನಿಸಿದೆ.
ಸರಕಾರ ಇತ್ತೀಚೆಗೆ ವಕ್ಫ್ ಬೋರ್ಡ್‌ಗೆ ಮಾಜಿ ಅಧ್ಯಕ್ಷ ಖಾಲಿದ್ ಅಹ್ಮದ್, ಮೌಲಾನಾ ಸೈಯದ್ ಮುಹಿಯುದ್ದೀನ್ ಹುಸೇನಿ ಪೀರ್ ಝಾದೆ, ಮೌಲಾನಾ ಮೀರ್ ಖಾಸಿಂ ಅಬ್ಬಾಸ್ ಹಾಗೂ ಐಪಿಎಸ್ ಅಧಿಕಾರಿ ಸಾರಾ ಫಾತಿಮಾ ಅವರನ್ನು ನಾಮನಿರ್ದೇಶನ ಮಾಡಿತ್ತು.