ಬೆಂಗಳೂರು: ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವ ಇಂಧನ ಇಲಾಖೆ, ಕಳೆದ ಬೇಸಿಗೆ (ಎಪ್ರಿಲ್ ೧) ನಂತರ ರಾಜ್ಯದಲ್ಲಿ ೧,೪೦೩ ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ ಮಾಡಿದೆ.
ಬೆಸ್ಕಾಂ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ೨೦೨೪ರ ಏಪ್ರಿಲ್ ೧ರಿಂದ ಜುಲೈ ಅಂತ್ಯದವರೆಗೆ ೧,೪೦೩ ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗಿದೆ. ಮೇ ೧೮ರವರೆಗೆ ವಿದ್ಯುತ್ ಖರೀದಿ ಹೆಚ್ಚಾಗಿದ್ದರೆ, ನಂತರದಲ್ಲಿ ಮಾರಾಟ ಹೆಚ್ಚಾಗಿದೆ. ಪ್ರತಿನಿತ್ಯ ೩೦ರಿಂದ ೪೦ ಕೋಟಿ ರೂ. ಮೊತ್ತದ ವಿದ್ಯುತ್ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ರಾಜ್ಯದಲ್ಲಿ ನಿತ್ಯ ಸರಾಸರಿ ೨೫೦ ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಈ ಪೈಕಿ ೨೦ ಮಿಲಿಯನ್ ಯೂನಿಟ್‌ಅನ್ನು ಬೇಸಿಗೆಯಲ್ಲಿ ವಿನಿಮಯ ಆಧಾರದ ಮೇಲೆ ವಿದ್ಯುತ್ ಪಡೆದುಕೊಂಡಿರುವ ಪಂಜಾಬ್ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ಪೂರೈಸಲಾಗುತ್ತಿದೆ. ೪೦ರಿಂದ ೫೦ ಮಿಲಿಯನ್ ಯೂನಿಟ್ ಮಾರಾಟ ಮಾಡಲಾಗುತ್ತಿದೆ. ೧೮೦ ಮಿಲಿಯಿನ್ ಯೂನಿಟ್ ವಿದ್ಯುತ್ ರಾಜ್ಯದಲ್ಲಿ ಬಳಕೆಯಾಗುತ್ತಿದೆ ಎಂದು ಹೇಳಿದರು.