ಬೆಂಗಳೂರು: ಜೆಡಿಎಸ್ ನಾಯಕರ ಕುಟುಂಬದ ಒಳಗಿನ ಜಗಳದಿಂದಾಗಿಯೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣ ಹೊರಬಂದಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜತೆ ಇಂದು ಶನಿವಾರ ಮಾತನಾಡಿದ ಅವರು, ವಿಡಿಯೊಗಳು ಬಹಿರಂಗವಾದ ಬಳಿಕ ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಹೇಳಿದವರು ಯಾರು ರಾಜ್ಯದ ಜನರ ಕ್ಷಮೆ ಕೇಳಿದ್ದು ಯಾರು ಅವರ ಕುಟುಂಬ ಮತ್ತು ನಮ್ಮ ಕುಟುಂಬ ಬೇರೆ ಬೇರೆ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದರು. ಮೇ ೭ರ ಬಳಿಕ ಪ್ರಕರಣ ಎಲ್ಲಿಗೆ ಹೋಗುತ್ತದೆ ಕಾದು ನೋಡಿ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮೇ ೭ ಅಲ್ಲ. ಅಲ್ಲಿವರೆಗೂ ಏಕೆ ಕಾಯಬೇಕು. ಇದರ ಮೂಲ, ಹಿನ್ನೆಲೆ ಏನು ಎಂಬುದನ್ನು ಬಿಚ್ಚಬೇಕಾ ಇದು ಅವರ ಕುಟುಂಬದ ಆಂತರಿಕ ವಿಷಯ ಎಂದರು.
ಒಕ್ಕಲಿಗ ನಾಯಕತ್ವ ಪಡೆಯಲು ಪ್ರಜ್ವಲ್ ಪ್ರಕರಣ ಹೊರ ಹಾಕಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನನಗೆ ಕಾಂಗ್ರೆಸ್ ನಾಯಕ ಎಂಬುದೇ ಸಾಕು. ಒಕ್ಕಲಿಗ ನಾಯಕನ ಪಟ್ಟ ಬೇಕಿಲ್ಲ. ಬಿಜೆಪಿಯವರು ಗಂಟೆಗೊಂದು ಗಳಿಗೆಗೊಂದು ಮಾತನಾಡುತ್ತಿದ್ದಾರೆ. ಜೆಡಿಎಸ್‌ನವರೂ ಅದೇ ರೀತಿ ಮಾತನಾಡುತ್ತಿದ್ದಾರೆ ಎಂದರು.