ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಡಿ.ವಿ.ಎಸ್.ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ನಡೆದ ಭರಮಸಾಗರ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯ ಹಂತ-೨ ಮತ್ತು ಹಂತ-೩ರಲ್ಲಿ ಕೆ.ಆರ್.ಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ೭ನೇ ತರಗತಿ ವಿದ್ಯಾರ್ಥಿಗಳಾದ ಎಂ.ಚಂದನ ದೇಶ ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ, ವಿ.ಸಿಂಚನಾ ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನ ಹಾಗೂ ೬ನೇ ತರಗತಿ ವಿದ್ಯಾರ್ಥಿ ಎನ್.ಸೌಜನ್ಯ ಇಂಗ್ಲಿಷ್ ಕಂಠಪಾಠದಲ್ಲಿ ಪ್ರಥಮಸ್ಥಾನ ಪಡೆದಿದ್ದಾರೆ. ಪ್ರೌಢಶಾಲಾ ವಿಭಾಗದಲ್ಲಿ ೯ನೇ ತರಗತಿ ವಿದ್ಯಾರ್ಥಿಗಳಾದ ಕೇಶಿನಿ ಜೆ ನಾಯಕ್ ಭಾವಗೀತೆಯಲ್ಲಿ ಪ್ರಥಮಸ್ಥಾನ ಹಾಗೂ ಎಂ.ಎಸ್.ಫೈಜಾನ್ ಮತ್ತು ತಂಡದವರಿಂದ ಕವ್ವಾಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಾಲೆಯ ೧೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ, ೫ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಶಾಲೆಗೆ ಕೀತಿ ತಂದಿದ್ದಾರೆ. ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಹೆಚ್. ನಾಗರಾಜ್, ಸಂಗೀತ ಶಿಕ್ಷಕ ಎ.ಎಂ.ಆರ್ ಮಲ್ಲಿಕಾರ್ಜುನಯ್ಯ, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.