ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಸಾಲಿಗ್ರಾಮ ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಎಸ್.ಎನ್.ನರಗುಂದ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ವಿವಿಧ ಇಲಾಖೆಯ ಪ್ರಮುಖರು ಹಾಜರಾಗದೆ ತಮ್ಮ ಕಚೇರಿಯ ಸಿಬ್ಬಂದಿಗಳನ್ನು ಕಳಿಸುವ ಮೂಲಕ ಸಭೆಯಲ್ಲಿ ಯಾವುದೇ ವಿಷಯವನ್ನು ಚರ್ಚಿಸಿದರು ಕೂಡ ಅವರುಗಳು ನಮ್ಮ ನಮ್ಮ ಇಲಾಖೆಯ ಮೇಲಾಧಿಕಾರಿಗಳಿಗೆ ಕೇಳಿ ತಿಳಿಸುತ್ತೇವೆ, ಅವರಿಗೆ ಹೇಳುತ್ತೇವೆ, ನೋಡುತ್ತೇವೆ, ಮಾಡುತ್ತೇವೆ, ನಮಗೆ ಯಾವುದೇ ಅನುದಾನ ಬಂದಿಲ್ಲ ಎಂಬ ಮಾತುಗಳನ್ನು ತಹಶೀಲ್ದಾರ್ ಅವರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಸರ್ಕಾರಿ ಇಲಾಖೆಗಳಿಂದ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಉತ್ತಮವಾಗಿ ಮಾಡಲು ಹಣದ ಕೊರತೆ ಇದ್ದರೆ ಸಾರ್ವಜನಿಕರಿಂದ ವಂತಿಗೆ ಸಂಗ್ರಹಣೆ ಮಾಡಿ ಉತ್ತಮವಾಗಿ ಮಾಡೋಣ ನಮ್ಮ ಜೊತೆಗೆ ಅಧಿಕಾರಿಗಳು ನೀವು ಬನ್ನಿ ಎಂದು ಕರೆದ ಘಟನೆಯು ನಡೆಯಿತು.
ತಾಲೂಕು ಕಚೇರಿಯಲ್ಲಿ ನಡೆಯುವ ಯಾವುದೇ ಪೂರ್ವಭಾವಿ ಸಭೆಗಳಾಗಲಿ ಅಥವಾ ಜಯಂತಿ ಕಾರ್ಯಕ್ರಮಗಳಾಗಲಿ ವಿವಿಧ ಇಲಾಖೆಗಳ ಅಧಿಕಾರಿಗಳು ನಿರಂತರವಾಗಿ ಗೈರು ಹಾಜರಾಗುವ ಮೂಲಕ ತಾಲೂಕು ದಂಡಾಧಿಕಾರಿಗಳು ನೀಡುವ ಪತ್ರಕ್ಕೆ ಗೌರವವನ್ನು ನೀಡದೆ ತಮ್ಮ ಪಾಡಿಗೆ ತಾವು ಇರುವುದು ಕಂಡು ಬರುತ್ತಿದ್ದು ಈ ವಿಷಯವಾಗಿ ಸಭೆಯಲ್ಲಿ ಎಲ್ಲರೂ ಕೂಡ ಒಮ್ಮತದಿಂದ ಸಭೆಗಳಿಗೆ ಗೈರು ಹಾಜರಾಗುತ್ತಿರುವ ಅಧಿಕಾರಿಗಳಿಗೆ ಸ್ಪಷ್ಟವಾಗಿ ನೋಟಿಸ್ ನೀಡಬೇಕು ಹಾಗೂ ಮುಂದಿನ ದಿನಗಳಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಮಾಡಬೇಕು ಆ ಮೂಲಕ ಇಂತಹ ಗೊಂದಲಗಳು ಮರುಕಳಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ತಹಶೀಲ್ದಾರ್ ಅವರನ್ನು ಒತ್ತಾಯಿಸಿದರು.
ಇದೆಲ್ಲದರ ನಡುವೆ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಸಣ್ಣರಾಮಪ್ಪ, ಶಿರಸ್ತೆದಾರ್ ಸತೀಶ್, ಉಪ ಪ್ರಾಂಶುಪಾಲೆ ವತ್ಸಲ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರವಿ, ಚೆಸ್ಕಾಂ ಎಇಇ ಮಧುಸೂದನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಪೊಲೀಸ್ ಇಲಾಖೆ ಕುಮಾರ್, ಆರೋಗ್ಯ ಇಲಾಖೆಯ ನವೀನ್ ಕುಮಾರ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಕಳ್ಳಿಮುದ್ದನಹಳ್ಳಿ ಚಂದ್ರು, ಶಂಕರ್, ಪ್ರೀತಮ್ ಸೇರಿದಂತೆ ಹಲವರು ಇದ್ದರು.