ರಾಮನಗರ: ಹವಾಮಾನ ಇಲಾಖೆಯ ವರದಿಯಂತೆ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸಂಭವವಿದ್ದು, ನೆರೆ ಅಥವಾ ಪ್ರವಾಹದಿಂದ ಉಂಟಾಗುವ ಸಂಭಾವ್ಯ ಅನಾಹುತಗಳನ್ನು ತಡೆಗಟ್ಟಲು ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು, ತಪ್ಪಿದ್ದಲ್ಲೀ ಅವರ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ (ವಿಪತ್ತು ನಿರ್ವಹಣೆ, ನೋಂದಣಿ & ಮುದ್ರಾಂಕ ಹಾಗೂ ಸಾಮಾಜಿಕ ಭದ್ರತೆ) ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅವರು ಜೂ.೧೧ರ ಮಂಗಳವಾರ ನಗರದ ಜಿಲ್ಲಾ ಪಂಚಾಯಿತ್ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಮುಂಗಾರು ಪೂರ್ವಸಿದ್ದತೆ ಹಾಗೂ ಬರಗಾಲ ನಿವಾರಣೆಯ ಕುರಿತು ಆಯೋಜಿಸಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೂನ್ ಮತ್ತು ಜುಲೈ ಮಾಹೆಯಲ್ಲಿ ಮುಂಗಾರು ಮಳೆಯಾಗಲಿದೆ, ಈ ಸಂದರ್ಭದಲ್ಲಿ ಎದುರಾಗುವ ನೆರೆ ಹಾಗೂ ಪ್ರವಾಹದ ಸ್ಥಿತಿಗಳನ್ನು ಸಮರ್ಪಕವಾಗಿ ಎದುರಿಸಲು ಅಧಿಕಾರಿಗಳು ಪೂರ್ವ ಸನ್ನದ್ದರಾಗಿರಬೇಕು, ಅವರು ಕೇಂದ್ರಸ್ಥಾನದಲ್ಲಿಯೇ ಇರಬೇಕು, ಕಳೆದ ಬಾರಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ/ನೆರೆ ಸ್ಥಳಗಳ ಬಗ್ಗೆ ಎಚ್ಚರ ವಹಿಸಬೇಕು, ಜನ, ಜಾನುವಾರುಗಳ ಸಂರಕ್ಷಣೆ ಹಾಗೂ ಯಾವುದೇ ಜೀವ ಹಾನಿಯಾಗದಂತೆ ಎಚ್ಚರವಹಿಸಬೇಕು, ನೆರೆಯಿಂದಾಗಿ ಮನೆಗಳ ಕುಸಿತವಾದಲ್ಲೀ ಕೂಡಲೇ ಅವರ ಸ್ಥಳಾಂತರ ಹಾಗೂ ಪರಿಹಾರ ನೀಡಲು ಸನ್ನದ್ದರಾಗಿರಬೇಕು ಎಂದರು.
ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ವ್ಯತ್ಯಯವುಂಟಾಗಬಾರದು, ಕಳೆದ ಸಾಲಿನಲ್ಲಿ ೪೪,೧೨೮ ಎಕರೆ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು ನಾಲ್ಕು ಸಾವಿರ ರೈತರಿಗೆ ೨೦೦ ಲಕ್ಷ ರೂ. ಬರ ಪರಿಹಾರ ವಿತರಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಬಿತ್ತನೆ ಬೀಜಗಳ ವಿತರಣೆ:– ರೈತರ ಕೋರಿಕೆಯಂತೆ ಬಿತ್ತನೆ ಬೀಜಗಳ ಗುಣಮಟ್ಟವನ್ನು ಪರೀಕ್ಷಿಸಿ ಪೂರೈಸಬೇಕು, ಅಗತ್ಯಕ್ಕೆ ತಕ್ಕಷ್ಟು ದಾಸ್ತಾನಿರಬೇಕು, ಈ ಕುರಿತು ರೈತರಿಂದ ಯಾವುದೇ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು ಮತ್ತು ಕಡ್ಡಾಯವಾಗಿ ಬಿತ್ತನೆ ಬೀಜಗಳ ದಾಸ್ತಾನು ಮಾಹಿತಿಯನ್ನು ರೈತರಿಗೆ ನೀಡಬೇಕು ಅಲ್ಲದೆ ಅಂಗಡಿಗಳ ಮುಂಭಾಗದಲ್ಲಿ ಪ್ರತಿದಿನ ಪ್ರದರ್ಶಿಸಬೇಕು, ಇದನ್ನು ತಹಶೀಲ್ದಾರರು ಪರಿಶೀಲಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ತೊಗರಿ ೩೧.೭೦, ಅಲಸಂದೆ, ೩೬.೭೫, ರಾಗಿ, ೩೧೫.೩೫, ಮುಸುಕಿನ ಜೋಳ ೫೦.೨೮ ಮತ್ತು ನೆಲಗಡಲೆ ೩.೮೫ ಕ್ವಿಂಟಾಲ್ ಬಿತ್ತನೆ ಬೀಜಗಳು ದಾಸ್ತಾನಿದೆ, ಜಿಲ್ಲೆಯಲ್ಲಿ ಇದೂವರೆಗೆ ಭಾರಿ ಗಾಳಿ ಮತ್ತು ಮಳೆಯಿಂದ ಜಿಲ್ಲೆಯಲ್ಲಿ ತೆಂಗು, ಪಪ್ಪಾಯ, ಬಾಳೆ, ಅಡಿಕೆ ಮತ್ತು ವಿಳ್ಯದೆಲೆ ಬೆಳೆಗಳು ಒಟ್ಟು ೫೨.೬೦ ಎಕರೆಯಷ್ಟು ಹಾನಿ, ೪೧ ಮನೆಗಳು ಸಣ್ಣ ದುರಸ್ತಿಯಾಗಿದೆ ಯಾವುದೇ ಜೀವಹಾನಿ ಆದ ಬಗ್ಗೆ ವರದಿಯಾಗಿಲ್ಲ ಎಂದರು.
ಕುಡಿಯುವ ನೀರು:– ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಡಿಸೆಂಬರ್ ೨೦೨೩ ಮಾಹೆಯಿಂದ ಈವರೆವಿಗೆ ೧೮೯.೧೧ ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ. ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಿ ಅಗತ್ಯವಿದ್ದಲ್ಲಿ ದುರಸ್ತಿ ಕಾರ್ಯ ಮಾಡಿಸಿ, ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಮಾಗಡಿ ತಾಲ್ಲೂಕು ತಿಪ್ಪಸಂದ್ರ ಗ್ರಾಮದಲ್ಲಿ ಮೇವು ಸಂಸ್ಕರಣಾ ಘಟಕ ಸ್ಥಾಪಿಸಿ ೩೪ ಸಾವಿರ ಕೆ.ಜಿ ಮೇವು ವಿತರಿಸಲಾಗಿದೆ, ಕನಕಪುರ ತಾಲ್ಲೂಕು ಹೆಗ್ಗನೂರು ಗ್ರಾಮದಲ್ಲಿ ಗೋಶಾಲೆಯನ್ನು ತೆರೆಯಲಾಗಿದೆ ಎಂದರು. ಜಿಲ್ಲೆಯಲ್ಲಿ ಈವರೆವಿಗೆ ೨೧,೯೧೯ ಮೇವು ಕಿಟ್ ವಿತರಣೆ ಮತ್ತು ೧೬,೯೯೫ ಸಣ್ಣ ಮೇವು ಕಿಟ್ ವಿತರಿಸಲಾಗಿದೆ ಎಂದು ಹೇಳಿದರು.
ನೆರೆ ಹಾವಳಿಗೆ ಕ್ರಮ:- ಕಳೆದ ಬಾರಿ ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕುಗಳಲ್ಲಿ ನೆರೆ ಹಾವಳಿಯಿಂದಾದ ಸಮಸ್ಯೆಗಳು ಈ ಬಾರಿ ಮರುಕುಳಿಸದಂತೆ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು, ತಿಪ್ಪಗೊಂಡನಹಳ್ಳಿ ಸುತ್ತಮುತ್ತಲು ಭಾರಿ ಮಳೆಯಾಗುತ್ತಿರುವುದರಿಂದ ಆ ಜಲಾಶಯಕ್ಕೆ ಒಳ ಹರಿವು ಹೆಚ್ಚುತ್ತಿದ್ದು, ತಿಪ್ಪಗೊಂಡನಹಳ್ಳಿ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದಲ್ಲೀ ಅದು ಮಂಚನಬೆಲೆ ಜಲಾಶಯಕ್ಕೆ ಪ್ರವೇಶಿಸುತ್ತದೆ, ಆಗ ಮಂಚನಬೆಲೆ ಜಲಾಶಯದ ಸುತ್ತಮತ್ತಲಿನ ಪ್ರದೇಶದ ಜನರು ನೆರೆಯಂತಹ ತೊಂದರೆಗೆ ಸಿಲುಕುತ್ತಾರೆ ಆದ ಕಾರಣ ಮಂಚನಬೆಲೆ ಜಲಾಶಯದ ಸುತ್ತಮುತ್ತಲ ಪ್ರದೇಶದ ಜನರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದರು.
ಅಗ್ನಿಶಾಮಕ ಇಲಾಖೆಯ ನುರಿತ ತಜ್ಞರು ಇದೂವರೆಗೆ ೨೮೦ ಜನರಿಗೆ ನೆರೆ ಹಾವಳಿ ಕುರಿತ ತರಬೇತಿಯನ್ನು ನೀಡಿರುತ್ತಾರೆ, ನೆರೆ ಅಥವಾ ಇತರೆ ಪ್ರಾಕೃತಿಕ ವಿಕೋಪ ಸ್ಥಿತಿಗಳನ್ನು ಎದುರಿಸಲು ಅಗ್ನಿ ಶಾಮಕ ಇಲಾಖೆಯವರು ಅಗತ್ಯವಿರುವ ಪರಿಕರಿಗಳೊಂದಿಗೆ ಸನ್ನದ್ದರಾಗಿರುವಂತೆ ಅವರು ತಿಳಿಸಿದರು. ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಉಪ ಕಾರ್ಯದರ್ಶಿ ರಾಘವೇಂದ್ರ ವೇದಿಕೆಯಲ್ಲಿದ್ದರು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.