ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮಹಿಳೆಯರು ಮತ್ತು ಗರ್ಭಿಣಿ ಸ್ತ್ರೀಯರು ಸಮಯಕ್ಕೆ ಸರಿಯಾಗಿ ಪೌಷ್ಠಿಕ ಆಹಾರ ಸೇವಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಸಿ.ಅರವಿಂದ್ರ ಸಲಹೆ ನೀಡಿದರು.
ಸಾಲಿಗ್ರಾಮ ತಾಲೂಕಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಹಯೋಗದಲ್ಲಿ ನಡೆದ ಪೋಷಣ್ ಪೌಷ್ಠಿಕ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದರ ಜತೆಗೆ ಕಾಲ ಕಾಲಕ್ಕೆ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಬಾಲ್ಯ ವಿವಾಹ ತಡೆಗೆ ಹೆಚ್ಚಿನ ಆದ್ಯತೆ ನೀಡಿ ಅಂತಹ ಪ್ರಕರಣಗಳು
ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸಲು ಸಹಕರಿಸಬೇಕೆಂದರಲ್ಲದೆ ಈ ವಿಚಾರದಲ್ಲಿ ನ್ಯಾಯಾಲಯವು ನಿಮ್ಮ ಸಹಾಯಕ್ಕೆ ಬರಲಿದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೂ ಆರೋಗ್ಯಾಧಿಕಾರಿ ಹೇಮೇಶ್ ತಮ್ಮ ವೈಯುಕ್ತಿಕ ವೆಚ್ಚದಲ್ಲಿ ಸೊಳ್ಳೆ ಪರದೆಗಳನ್ನು ಉಚಿತವಾಗಿ ವಿತರಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದನ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಆಸ್ರೀನಾ, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್, ಸಿಡಿಪಿಒ ಸಿ.ಎಂ.ಅಣ್ಣಯ್ಯ ಮಾತನಾಡಿದರು.
ಪಿಡಿಒ ಚಿದಾನಂದ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಚಿನ್, ಉಪನ್ಯಾಸಕಿ ರಂಜಿತಾ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅಕ್ಕಮಹಾದೇವಿ, ಮಹಿಳಾ ಮೇಲ್ವಿಚಾರಕಿ ಮಂಜುಳ, ವಕೀಲ ಡಿ.ಸಿ.ಗೋವಿಂದರಾಜು, ಅಂಗನವಾಡಿ ಮತ್ತು ಆಶಾಕಾರ್ಯಕರ್ತೆಯರು ಹಾಜರಿದ್ದರು.