ಮೈಸೂರು: ಜಿಲ್ಲಾ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಮೈಸೂರು ಜಿಲ್ಲಾ ಕಾಂಗ್ರೆಸ್‌ನಿಂದ ವಿವಿಧ ಮುಂಚೂಣಿ ಘಟಕಗಳ ಸರಣಿ ಸಭೆಯನ್ನು ಶುಕ್ರವಾರ ನಡೆಸಲಾಯಿತು.
ಮೈಸೂರು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ೩ನೇ ಕಾರ್ಯಕಾರಣಿ ಸಭೆಯನ್ನು ಇಂದಿರಾ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಪಂಚಾಯತ್ ರಾಜ್ ಸಂಘಟನೆ ವೈಯಕ್ತಿಕ ಮತ್ತು ಪಕ್ಷ ಬೆಳವಣಿಗೆಗೆ ಭಧ್ರ ಬುನಾದಿ ಹಾಕಿಕೊಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಈ ಸಂಘಟನೆ ಪ್ರತಿ ಮನೆ ಬಾಗಿಲಿಗೆ ತಲುಪಲು ಸುಲಭ ವಿಧಾನವಾಗಿದೆ. ರಾಜೀವ್ ಗಾಂಧಿ ಅವರ ಪರಿಕಲ್ಪನೆಯಲ್ಲಿ ಸ್ಥಾಪನೆಯಾದ ಈ ಸಂಘಟನೆ ಬೂತ್ ಮಟ್ಟದಲ್ಲಿ ಪಕ್ಷ ಕಟ್ಟಲು ನೆರವಾಗುತ್ತದೆ ಎಂದು ಹೇಳಿದರು.
ಮುಂದುವರೆದು ಮೈಸೂರು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಲ್ಲಿ ಯಾರು ಸಕ್ರಿಯವಾಗಿ ಕೆಲಸ ಮಾಡದವರನ್ನು ಸಂಘಟನೆಯಿಂದ ಕೈ ಬಿಡಬೇಕು ಎಂದು ಜಿಲ್ಲಾ ಪಂಚಾಯತ್ ರಾಜ್ ಘಟಕದ ಅಧ್ಯಕ್ಷರಿಗೆ ಕಟ್ಟು ನಿಟ್ಟಾದ ಸೂಚನೆ ಕೊಟ್ಟರು. ಪಕ್ಷ ಸಂಘಟನೆ ಮಾಡುವುದು ನಮ್ಮ ಮೂಲ ಉದ್ದೇಶ ಎಂದು ಹೇಳುವ ಮೂಲಕ ಕಾರ್ಯಕರಿಗೆ ಮುಂದಿನ ಚುನಾವಣೆಗಳಿಗೆ ಸಜ್ಜಾಗಲು ಕರೆ ಕೊಟ್ಟರು. ನಂತರ ಮೈಸೂರು ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಮಲ್ಲೇಶ್ ಕೋಟೆ ಮಾತನಾಡಿ, ಆರ್.ಧ್ರುವ ನಾರಾಯಣ್ ಅವರನ್ನು ನೋಡಿ ಪಕ್ಷ ಸಂಘಟನೆ ಕಲಿಯಬೇಕು. ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಪಕ್ಷ ನೀಡಿದ ಪಂಚ ಗ್ಯಾರೆಂಟಿಗಳನ್ನು ಹೆಚ್ಚು ಪ್ರಚಾರ ಮಾಡಬೇಕು ಎಂದರು.
ಈಗಾಗಲೇ ಅನುಷ್ಠಾನ ಆಗಿರುವ ೪ ಗ್ಯಾರಂಟಿಗಳನ್ನು ಪ್ರತಿ ಮನೆ ಬಾಗಿಲು ತಲುಪಿಸಬೇಕು. ನಮ್ಮ ಕಷ್ಟ ಸುಖವನ್ನು ಕೇಳಲು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಇದ್ದಾರೆ. ಶಕ್ತಿ ಮೀರಿ ಶ್ರಮಿಸಿ ಮುಂಬರುವ ಚುನಾವಣೆಗಳಿಗೆ ಸಜ್ಜಾಗಬೇಕು ಎಂದು ಹೇಳಿದರು.
ಇದೆ ಕಾರ್ಯಕ್ರಮ ಸಭೆಯಲ್ಲಿ ಸಂಘಟನೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕೊಟ್ಟೆ ಮಲ್ಲೇಶ್ ಅವರು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಅವರಿಗೆ ಸಲ್ಲಿಸಿದರು. ಸಭೆಯಲ್ಲಿ ಜಿಲ್ಲಾ ಮಹಿಳಾ ವಿಭಾಗ, ಕಾರ್ಮಿಕ ವಿಭಾಗ ಕಾರ್ಮಿಕ, ಅಲ್ಪಸಂಖ್ಯಾತ ಘಟಕದ ಪ್ರಮುಖ ಕಾರ್ಯಕಾರಣಿಯನ್ನು ನಡೆಸಿ ಪ್ರಮುಖ ವಿಚಾರಗಳ ಚರ್ಚೆ ನಡೆಸಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.