Saturday, April 4, 2026
Google search engine

Homeಸಿನಿಮಾ‘ಮೃತ್ಯುದೇವತೆ’ ಚಿತ್ರದ ಬಿಡುಗಡೆಗೆ ಸಿದ್ಧತೆ

‘ಮೃತ್ಯುದೇವತೆ’ ಚಿತ್ರದ ಬಿಡುಗಡೆಗೆ ಸಿದ್ಧತೆ

ಬೆಂಗಳೂರು : ಕಿರುತೆರೆಗಳಲ್ಲಿ ನಿರ್ದೇಶಿಸಿದ್ದ ನಿರ್ದೇಶಕ ನವೀನ್‍ ಮಹದೇವ ಮೊದಲ ಬಾರಿಗೆ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿರುವ ‘ಮೃತ್ಯುದೇವತೆ’ ಚಿತ್ರದ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ.

ಉತ್ಸವ್‍ ಲೆಗಸಿ ಸಭಾಂಗಣದಲ್ಲಿ ಚಿತ್ರದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳಲ್ಲದೆ ಟ್ರೇಲರ್ ಸಹ ಬಿಡುಗಡೆಯಾಯಿತು. ಮಾಜಿ ಕೌನ್ಸಿಲರ್ ಮತ್ತು ಉದ್ಯಮಿ ಕೆ. ರಮೇಶ್‍ ಟ್ರೇಲರ್ ಬಿಡುಗಡೆ ಮಾಡಿದರೆ, ಉದ್ಯಮಿ ಹಾಗೂ ಸಮಾಜಸೇವಕ ಶ್ರೀನಿವಾಸ್‍ ‘ಮಹಾದೇವ’ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ಹಿರಿಯ ನಟಿ ವಿನಯಾ ಪ್ರಸಾದ್‍, ‘ಕಾಳಿ’ ಹಾಡಿನ ಮೇಕಿಂಗ್‍ ವೀಡಿಯೋ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನವೀನ್‍ ಮಹಾದೇವ್‍, ‘ಇದಕ್ಕೂ ಮೊದಲು ಕಿರುಚಿತ್ರ ಮಾಡಿದ್ದೆ. ಅದರ ಬಿಡುಗಡೆಗೂ ಮೊದಲೇ ‘ಮೃತ್ಯುದೇವತೆ’ ಚಿತ್ರಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಹೆಣ್ಮಕ್ಕಳು ಅದೆಷ್ಟೇ ಬುದ್ಧಿವಂತರಾದರೂ, ಎಷ್ಟೋ ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ‘ಕುಡಿತ, ದುಡ್ಡು, ಕೆಟ್ಟ ಸಹವಾಸ ಮತ್ತು ದುರಹಂಕಾರ ಇರುವವರ ಜೊತೆಗೆ ಮಾನಕ್ಕೆ ಅಂಜುವ ಹೆಣ್ಣು ಮಕ್ಕಳು ಇರಬಾರದು’ ಎಂಬ ಸಂಭಾಷಣೆಯೊಂದು ಚಿತ್ರದಲ್ಲಿದೆ.

ಇದೆಲ್ಲದರಿಂದ ತೊಂದರೆಗೊಳಗಾದ ಹುಡುಗಿ ಸಹನೆಯಿಂದ ಈ ಮಾತು ಹೇಳಿ ಎದ್ದು ಹೋಗುತ್ತಾಳೆ. ಆ ತೊಂದರೆ ಅತಿರೇಕಕ್ಕೆ ಹೋದಾಗ ಹುಡುಗಿ ಮೃತ್ಯದೇವತೆ, ಚಂಡಿ-ಚಾಮುಂಡಿ ಅವತಾರ ತಾಳುತ್ತಾಳೆ. ಅದೇ ಈ ಚಿತ್ರದ ಕಥಾವಸ್ತು. ಹೊಸಬರೇನು ಮಾಡಿದ್ದಾರೆ ಅಂದುಕೊಳ್ಳದೆ ಚಿತ್ರವನ್ನು ನೋಡಿ ಹರಸಿ-ಹಾರೈಸಿ. ಚಿತ್ರವನ್ನು ಡಾ. ರಾಜಕುಮಾರ್‍ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವ ಯೋಚನೆ ಇದೆ. ಈಗಾಗಲೇ ಚಿತ್ರ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಸೆನ್ಸಾರ್‌ ಆಗಲಿದೆ’ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular