ಕೆ.ಆರ್.ಪೇಟೆ : 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ದಿನಾಂಕ 18-03-26 ರಿಂದ 02-04-26 ರ ವರೆಗೆ ನಡೆಯಲಿದ್ದು ಸುಗಮ ಪರೀಕ್ಷೆಗೆ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಧಿಕಾರಿ ವೈ.ಕೆ.ತಿಮ್ಮೇಗೌಡ ತಿಳಿಸಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸುಗಮ ಪರೀಕ್ಷೆಗೆ ಇಲಾಖಾ ವತಿಯಿಂದ ಕೈಗೊಂಡಿರುವ ಸಿದ್ದತಾ ಕ್ರಮಗಳನ್ನು ವಿವರಿಸಿದರು. ಎಸ್ಎಸ್ಎಲ್‌ಸಿ ಪರೀಕ್ಷೆ ಮಾ.18 ರಿಂದ ಏಪ್ರಿಲ್ 02 ರವರೆಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.25 ರ ವರೆಗೆ ನಡೆಯಲಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ಕೆ.ಪಿ.ಎಸ್, ಕಿಕ್ಕೇರಿಯ ಕೆ.ಪಿ.ಎಸ್ ಶಾಲೆ, ಅಕ್ಕಿಹೆಬ್ಬಾಳು, ಬೂಕನಕೆರೆ ಮತ್ತು ಸಂತೇಬಾಚಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿ ಒಟ್ಟು 06 ಪರೀಕ್ಷಾ ಕೆಂದ್ರಗಳನ್ನು ತೆರೆಯಲಾಗಿದಗದು 2423 ಫ್ರೆಷ್ ಹಾಗೂ 203 ಪುನರಾವರ್ತಿತರು ಸೇರಿ ಒಟ್ಟು 2626 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಒಟ್ಟಾರೆ 1167 ಹೆಣ್ಣು ಮತ್ತು 1256 ಗಂಡು ಮಕ್ಕಳು ಸೇರಿ 2423 ಮಂದಿ ಹೊಸದಾಗಿ ಪರೀಕ್ಷೆ ಬರೆಯುತ್ತಿದ್ದು ಪರೀಕ್ಷೆ ಬರೆಯುವವರಲ್ಲಿ ಗಂಡು ಮಕ್ಕಳು ಹೆಚ್ಚಿದ್ದಾರೆ.
ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲೂ ಸಿಸಿ ಟಿವಿ ಅಳವಡಿಸಲಾಗಿದ್ದು, ಪ್ರತಿ ಪರೀಕ್ಷಾ ಕೆಂದ್ರಕ್ಕೆ ಇಬ್ಬರು ಸ್ಥಾನಿಕ ಜಾಗೃತ ದಳ ಸಿಬ್ಬಂದಿ ಹಾಗೂ ಅನ್ಯ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ತಾಲೂಕು ಹಂತದಲ್ಲಿ ತಹಶೀಲ್ದಾರರು, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣಾ ದಳವನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಹಾಗೂ ಈ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಭದ್ರತೆಗಾಗಿ ಆರಕ್ಷಕ ಸಿಬ್ಬಂಧಿ ಹಾಗೂ ಮಕ್ಕಳ ಆರೋಗ್ಯ ಕಾಳಜಿಗಾಗಿ ಶುಶ್ರೂಷಕರನ್ನು ನಿಯೋಜಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಡಿಜಿಟಲ್/ಸ್ಮಾರ್ಟ್ ಕೈಗಡಿಯಾರಗಳನ್ನು ಧರಿಸುವಂತಿಲ್ಲ ಎಂದರು.
ಅಲ್ಲದೆ, ತಾಲೂಕಿನ ಎಲ್ಲಾ ಪರೀಕ್ಷಾ ಕೆಂದ್ರಗಳಲ್ಲೂ ವಿದ್ಯಾರ್ಥಿಗಳಿಗೆ ಸೂಕ್ತ ಪೀಠೋಪಕರಣದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲಾ ಗೆಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಗೋಡೆಗೆ ಅಭಿಮುಖವಾಗಿ ಕುಳಿತುಕೊಂಡು ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಡಲಾಗಿದೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಯಾವುದೇ ಆತಂಕ ಪಡದೆ ಧೈರ್ಯದಿಂದ ಪರೀಕ್ಷೆಗಳನ್ನು ಬರೆದು ಯಶಸ್ವಿಯಾಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಕೆ.ತಿಮ್ಮೇಗೌಡ ಹಾರೈಸಿದರು.



