Friday, April 4, 2025
Google search engine

Homeಸ್ಥಳೀಯಮೈಸೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ

ಮೈಸೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ ಉಳಿತಾಯ ಬಜೆಟ್ ಮಂಡನೆ

ಮೈಸೂರು:  ಮೈಸೂರು ಮಹಾನಗರ ಪಾಲಿಕೆಯ 2023-24ನೇ ಸಾಲಿನ 9.05 ಕೋಟಿ ರೂ.ಗಳ ಉಳಿತಾಯ ಆಯವ್ಯಯವನ್ನು ಮೇಯರ್ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ತೆರಿಗೆ ನಿರ್ಧಾರ, ಹಣಕಾಸು ಮತ್ತು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನಾಗರಾಜು ಮಂಡಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಒಟ್ಟು 1058.01 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, 1048.96 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಹಿಂದಿನ ವರ್ಷ 1,015 ಕೋಟಿ ರೂ. ಆದಾಯ ನಿರೀಕ್ಷಿಸಿ, 1,009 ಕೋಟಿ ರೂ. ಖರ್ಚು ಮಾಡಲು ಉದ್ದೇಶಿಸಿ, 6.11 ಕೋಟಿ ರೂ. ಉಳಿತಾಯ ನಿರೀಕ್ಷಿಸಲಾಗಿತ್ತು.

2023-24ನೇ ಸಾಲಿನ ಬಜೆಟ್ನಲ್ಲಿ ಉದ್ಯಾನ, ಈಜುಕೊಳ, ಪೌರಕಾರ್ಮಿಕರ ವಿಶ್ರಾಂತಿಗೃಹ, ಗ್ರಂಥಾಲಯ ಕಟ್ಟಡ ಸೇರಿದಂತೆ ಹಲವು ಹಳೇ ಯೋಜನೆಗಳನ್ನೇ ಮತ್ತೆ ಪ್ರಸ್ತಾಪಿಸಿದ್ದರೆ, ವೃತ್ತಗಳ ಅಭಿವೃದ್ಧಿ, ಕುಡಿಯುವ ನೀರಿನ ಸಂಪರ್ಕ ಸರಳೀಕರಣ, ತ್ಯಾಜ್ಯ ನೀರು ಸಂಸ್ಕರಣ ಘಟಕಗಳ ಅಭಿವೃದ್ಧಿ, ಉನ್ನತೀಕರಣ, ಆರ್ಥಿಕವಾಗಿ ಹಿಂದುಳಿದ ವೃತ್ತಿಪರ ಜನಾಂಗಕ್ಕೆ ಪ್ರೋತ್ಸಾಹ ಧನದಂತಹ ಕೆಲ ಹೊಸ ಯೋಜನೆಗಳನ್ನು ಸೇರಿಸಲಾಗಿದೆ.

ಕಂದಾಯ ಸಂಗ್ರಹಣೆಯಲ್ಲಿ ನಿರೀಕ್ಷೆಗೆ ಮೀರಿದ ಗುರಿ ಸಾಧನೆ ಮಾಡಲಾಗಿದೆ. 2022-23ನೇ ಸಾಲಿನಲ್ಲಿ ಆಸ್ತಿ ತೆರಿಗೆ, ಖಾತಾ ವರ್ಗಾವಣೆ, ಜಾಹೀರಾತು ಶುಲ್ಕ, ಖಾತಾ ಪ್ರತಿ ಸೇರಿದಂತೆ ಇನ್ನಿತರ ಕಂದಾಯ ಬಾಬ್ತು 168.20 ಕೋಟಿ ರೂ. ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ 177.84 ಕೋಟಿ ರೂ. ಸಂಗ್ರಹಿಸಲಾಗಿದೆ. 2023-24 ಸಾಲಿಗೆ ಈ ಬಾಬ್ತಿನಿಂದ 171.75 ಕೋಟಿ ರೂ. ನಿರೀಕ್ಷಿಸಲಾಗಿದೆ.

ಹಿಂದಿನ ಸಾಲಿನಲ್ಲಿ ನೀರು ಹಾಗೂ ಒಳಚರಂಡಿ ನಿರ್ವಹಣಾ ತೆರಿಗೆ ಬಾಬ್ತು 633.5 ಕೋಟಿ ರೂ. ನಿರೀಕ್ಷೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿದ್ದು, 937.8 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಪ್ರಸಕ್ತ ಸಾಲಿನ ಆರ್ಥಿಕ ವರ್ಷದಲ್ಲಿ 629.5 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ.

ಕಟ್ಟಡ ಪರವಾನಗಿ, ನೆಲಬಾಡಿಗೆ, ರಸ್ತೆ ಅಗೆತ, ನೀರಿನ ಸಂಪರ್ಕ, ಸಿಆರ್ ನೀಡಿಕೆ, ಒಳಚರಂಡಿ ಶುಲ್ಕ ಸೇರಿದಂತೆ ಇನ್ನಿತರ ಮೂಲಗಳಿಂದ 120 ಕೋಟಿ ರೂ., ಉದ್ದಿಮೆ ಪರವಾನಗಿಯಿಂದ 100 ಕೋಟಿ ರೂ., ನಗರಪಾಲಿಕೆ ಆಸ್ತಿಯಿಂದ 2.99 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಅಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಬರುವ ಅನುದಾನದ ಅಡಿಯಲ್ಲಿ ಯೋಜನೆ ರೂಪಿಸಲು ಪ್ರಸ್ತಾಪಿಸಲಾಗಿದೆ.

RELATED ARTICLES
- Advertisment -
Google search engine

Most Popular